ಹ್ಯಾಟ್ರಿಕ್ ಹೀರೋ ಶಿವಣ್ಣಗೆ ರಾಜಭೂಷಣ ಪ್ರಶಸ್ತಿ ಪ್ರದಾನ
ಕ.ಪ್ರ. ವಾರ್ತೆ, ಮೈಸೂರು, ಆ.10
ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ಕುಮಾರ್ ಅವರ ಪುತ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮೈಸೂರಿನ ಅಭಿಮಾನಿಗಳು ರಾಜಭೂಷಣ ಪ್ರಶಸ್ತಿ ನೀಡಿ ಅಭಿಮಾನ ಮೆರೆದರು. ಈ ಸಾರ್ಥಕ ಕ್ಷಣಕ್ಕೆ ಪತ್ನಿ ಗೀತಾ ಶಿವರಾಜ್ಕುಮಾರ್ ಸಾಕ್ಷಿಯಾಗಿದ್ದರು.
ದೊಡ್ಡ ಗಡಿಯಾರದ ಶಿವಸೈನ್ಯ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ, ದತ್ತನಗರದ ಸ್ಯಾಂಡಲ್ವುಡ್ ಕಿಂಗ್ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕೆ.ಎನ್. ಪುರದ ಬಡವರ ಬಂಧು ಡಾ.ರಾಜ್ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ ಶನಿವಾರ ಊಟಿ ರಸ್ತೆಯ ದತ್ತನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ರಾಜಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಡಾ.ರಾಜ್ಕುಮಾರ್ ಅವರು ನಮ್ಮ ಅವಿಭಜಿತ ಮೈಸೂರು ಜಿಲ್ಲೆಯವರು. ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್ಕುಮಾರ್ ನಮ್ಮೂರಿನವರು. ಇಡೀ ಕುಟುಂಬ ಸಮಾಜಮುಖಿ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಯಾವುದೇ ವಿವಾದಗಳಿಲ್ಲದೆ, ಜಾತ್ಯತೀತರಾಗಿ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ತಂದುಕೊಟ್ಟ ಕೀರ್ತಿ ಡಾ.ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ. ಅವರಂತೆ ಶಿವರಾಜ್ಕುಮಾರ್ ಕೂಡ 27 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಮೈಸೂರಿನ ಅಭಿಮಾನಿಗಳು ನೀಡಿರುವ ಪ್ರಶಸ್ತಿ ಮೆಚ್ಚುವಂತದ್ದು ಎಂದರು.
ಶಕ್ತಿಯಾಗಿದ್ದ ಡಾ.ರಾಜ್: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ರಘು ಅಭಿನಂದನಾ ಭಾಷಣ ಮಾಡಿ, ಕನ್ನಡ ಸಂಘಟನೆಗಳಿಗೆ ಡಾ.ರಾಜ್ಕುಮಾರ್ ಒಂದು ಶಕ್ತಿಯಾಗಿದ್ದರು. ಅವರ ನಂತರ ಸುಪುತ್ರರಾದ ಶಿವರಾಜ್ಕುಮಾರ್ ಮುಂಚೂಣಿಯಲ್ಲಿದ್ದಾರೆ. ಜಗತ್ತಿಗೆ ಒಬ್ಬನೇ ಸೂರ್ಯನಂತೆ ಕನ್ನಡ ಕುಲಕೋಟಿಗೆ ಡಾ.ರಾಜ್ಕುಮಾರ್ ಅವರಂತ ಮೇರುನಟರು ಒಬ್ಬರೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಮಾಪಕ ಸಾ.ರಾ. ಗೋವಿಂದು, ಸಂದೇಶ್ ನಾಗರಾಜ್, ಮಾಜಿ ಕ್ರಿಕೆಟಿಗ ವಿಜಯ ಭಾರದ್ವಾಜ್, ನಟ ಅನೂಪ್ ಸಾ.ರಾ. ಗೋವಿಂದು, ಡಾ.ರಾಜ್ಕುಮಾರ್ ಅಭಿಮಾನಿ ದೇಸಿಗೌಡ, ಪತ್ರಕರ್ತ ಬಿಳಿಗಿರಿ ರಂಗನಾಥ್, ಕೆಜೆಪಿ ಮುಖಂಡ ಕಾ.ಪು. ಸಿದ್ಧಲಿಂಗಸ್ವಾಮಿ, ಶ್ರೀನಾಥ್ ಬಾಬು ಇದ್ದರು. ಬೆಂಗಳೂರು- ನೀಲಗಿರಿಸ್ ರಸ್ತೆಯ ಪಕ್ಕದಲ್ಲೇ ಕಾರ್ಯಕ್ರಮ ಏರ್ಪಡಿಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಸುತ್ತೂರು ಮಠಕ್ಕೆ ಭೇಟಿ: ಇದಕ್ಕೂ ಮೊದಲು ನಟ ಶಿವರಾಜ್ಕುಮಾರ್, ಪತ್ನಿ ಗೀತಾ ಶಿವರಾಜ್ಕುಮಾರ್ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಗಳ ಆಶೀರ್ವಾದ ಪಡೆದರು.