ಖೋ ಖೋ ಪಂದ್ಯಾವಳಿ; ಗ್ರಾಮೀಣರೇ ಮುಂದು
ಮೈಸೂರು: ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಗ್ರಾಮೀಣ ಪ್ರತಿಭೆಗಳೆ ಮುಂಚೂಣಿಯಲ್ಲಿದ್ದಾರೆ. ಪಯೋನೀರ್ಸ್ ಖೋ ಖೋ ಸ್ಪೋರ್ಟ್ಸ್ ಕ್ಲಬ್ ನಗರದ ಸುಬ್ಬರಾಯನ ಕೆರೆಯಲ್ಲಿ ಏರ್ಪಡಿಸಿದ್ದ ಈ ಖೋ ಖೋ ಪಂದ್ಯಾವಳಿಯ ಪ್ರೌಢಶಾಲೆ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ರಾಮಕೃಷ್ಣ ವಿದ್ಯಾಕೇಂದ್ರ ಪ್ರೌಢಶಾಲೆ ತಂಡವನ್ನು, ಹುಣಸೂರಿನ ಗರಸನಹಳ್ಳಿಯ ಸರ್ಕಾರಿ ಪ್ರೌಢಶಾಲೆ ತಂಡವು 6-5 ಅಂತರದಲ್ಲಿ ಮಣಿಸಿತು. ನಂಜನಗೂಡಿನ ಸಿಟಿಜನ್ ಶಾಲೆ ತಂಡವು, ಭೈರವೇಶ್ವರ ಶಾಲೆಯನ್ನು 2-1 ಅಂತರದಿಂದ ಮಣಿಸಿತು. ಕುರುಬೂರಿನ ನಿರ್ವಾಣಸ್ವಾಮಿ ಪ್ರೌಢಶಾಲೆಯು, ಮೈಸೂರಿನ ಭೈರವೇಶ್ವರ ಪ್ರೌಢಶಾಲೆ ತಂಡವನ್ನು 10-0 ಅಂತರದಿಂದ ಸೋಲಿಸಿತು. ಬಾಲಕರ ವಿಭಾಗದಲ್ಲಿಯೂ ನಿರ್ವಾಣಸ್ವಾಮಿ ಶಾಲೆಯ ಮಕ್ಕಳು, ಮಹಾಜನ ಪ್ರೌಢಶಾಲೆ ತಂಡವನ್ನು 5-2 ಅಂತರದಿಂದ ಮಣಿಸಿತು. ಪಿಯು ವಿಭಾಗದಲ್ಲಿ ನಂಜನಗೂಡಿನ ಸಿಟಿಜನ್ ತಂಡವು, ನಗರದ ಜೆಎಸ್ಎಸ್ ಊಟಿ ಕಾಲೇಜು ತಂಡವನ್ನು 6-1 ಅಂತರದಿಂದ ಪರಾಭವಗೊಳಿಸಿತು.