ಗಣಗೂರು ಸೆಕ್ಷನ್ ಬಳಿ 30 ವರ್ಷದ ಹೆಣ್ಣಾನೆ ಸಾವು
ಹುಣಸೂರು: ತೀವ್ರವಾಗಿ ಅಸ್ವಸ್ಥಗೊಂಡಿದ್ದ 30 ವರ್ಷದ ಹೆಣ್ಣಾನೆಯೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತಿಗೋಡು ವಲಯದ ಗಣಗೂರು ಸೆಕ್ಷನ್ ಬಳಿ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ಮತ್ತಿಗೋಡು ವಲಯದ ಗಣಗೂರು ಸೆಕ್ಷನ್‌ನ ತಾವರೆಕೆರೆ ಜೀಪ್ ರಸ್ತೆ ಬಳಿ ಈ ಹೆಣ್ಣಾನೆ ಅಸ್ವಸ್ಥಗೊಂಡಿತ್ತು. ಜೊತೆಗೆ ಮೂರು ವರ್ಷದ ಆನೆ ಮರಿಯೂ ಇತ್ತು. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಾಕಾನೆಗಳಾದ ಗೋಪಾಲಸ್ವಾಮಿ, ರಾಜೇಂದ್ರರ ನೆರವಿನಿಂದ ಮೇಲೇಳಿಸಲು ಪ್ರಯತ್ನಪಟ್ಟರಾದರೂ ಸಾಧ್ಯವಾಗಲಿಲ್ಲ.
ಚಿಕಿತ್ಸೆ ಫಲ ನೀಡಲಿಲ್ಲ: ಹುಲಿ ಯೋಜನೆ ಪಶುವೈದ್ಯ ಡಾ. ಉಮಾಶಂಕರ್ ಸ್ಥಳದಲ್ಲೇ ಚಿಕಿತ್ಸೆ ನೀಡಿ ಸಾಕಷ್ಟು ಗ್ಲೂಕೋಸ್ ನೀಡಿದರೂ ಫಲಕಾರಿಯಾಗಿಲ್ಲ. ಮೃತ ಆನೆಯ ಶವಪರೀಕ್ಷೆಯನ್ನು ವೈದ್ಯ ಡಾ.ಉಮಶಂಕರ್ ನಡೆಸಿದರು. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಆರ್. ಗೋಕುಲ್, ಎಸಿಎಫ್ ಬೆಳ್ಳಿಯಪ್ಪ, ವಲಯ ಅರಣ್ಯಾಧಿಕಾರಿ ದೇವರಾಜ್ ಭೇಟಿ ನೀಡಿದ್ದರು.
ಉಳಿಸಿಕೊಳ್ಳುವ ಪ್ರಯತ್ನ ವಿಫಲ: ಅಸ್ಪಸ್ಥ ಹೆಣ್ಣಾನೆಯನ್ನು ರಕ್ಷಿಸಲು ತಮ್ಮ ಅಧಿಕಾರಿಗಳು ಮತ್ತು ಪಶು ವ್ಯದ್ಯರು ಸಾಕಷ್ಟು ಪ್ರಯತ್ನಪಟ್ಟರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇದರ ಜತೆಯಲ್ಲಿದ್ದ ಮರಿ ಮಾತ್ರ ಸುರಕ್ಷಿತವಾಗಿ ಅರಣ್ಯದೊಳಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಆರ್. ಗೋಕುಲ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.