ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದುರಸ್ತಿಗಾಗಿ ಹೋರಾಟಕ್ಕೆ ಸಿದ್ಧ

Rashmi Kasaragodu
Updated On : 12 Aug 2013, 12:34 pm

ಟಿ. ನರಸೀಪುರ: ಒಡೆದು ಹೋಗಿರುವ ಮಾಧವ ಮಂತ್ರಿ ಅಣೆಕಟ್ಟೆಯನ್ನು ಉಳಿಸಿ, ನಾಲೆಯ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ನೀರು ಪಡೆದುಕೊಳ್ಳುವ ಸಂಬಂಧ ಹೋರಾಟ ರೂಪಿಸಲು ತಲಕಾಡು ಗ್ರಾಮದಲ್ಲಿ ಭಾನುವಾರ ನಡೆದ ರೈತರ ಸಭೆ ತೀರ್ಮಾನಿಸಿತು.
ತಾಲೂಕಿನ ತಲಕಾಡು ಗ್ರಾಮದ ಬಂಡರಸಮ್ಮ ದೇವಾಲಯ ಆವರಣದಲ್ಲಿ ಮಾಧವ ಮಂತ್ರಿ ಅಣೆಕಟ್ಟೆ ಉಳಿವಿಗಾಗಿ ಸಭೆ ಸೇರಿದ್ದ ರೈತರು ಸರ್ಕಾರ ತುರ್ತು ಕಾಮಗಾರಿ ಆರಂಭಿಸದಿದ್ದರೆ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು. ಪುರಾತನ ಅಣೆಕಟ್ಟೆ ಹಾಳಾಗಿದ್ದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಸಭೆಯಲ್ಲಿ ಮಾತನಾಡಿದ ಜೆಡಿಯು ನಾಯಕ, ಮಾಜಿ ಸಚಿವ ಬಿ. ಸೋಮಶೇಖರ್, ಐತಿಹಾಸಿಕ ಹಿನ್ನೆಲೆಯ ಮಾಧವ ಮಂತ್ರಿ ಅಣೆಕಟ್ಟೆ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಕಳೆದ ಭಾರಿ ಮಳೆಯ ಅಭಾವದಿಂದ ನಾಲೆಗೆ ನೀರು ಪೂರೈಕೆ ಆಗದೆ ಬೆಳೆ ಬೆಳೆಯಲಾಗಲಿಲ್ಲ. ಉತ್ತಮ ಮಳೆಯಾಗಿ ಅಣೆಕಟ್ಟೆ ಭರ್ತಿಯಾಗಿದ್ದರೂ ನೀರು ಪಡೆಯಲಾಗದೆ ಸಮಸ್ಯೆ ಎದುರಾಗಿದೆ ಎಂದರು.
40 ಸಾವಿರ ಕುಟುಂಬಕ್ಕೆ ಬವಣೆ: ಅಣೆಕಟ್ಟೆ ಒಡೆದು ಹೋದ್ದರಿಂದ 40 ಸಾವಿರಕ್ಕೂ ಹೆಚ್ಚು ಕುಟುಂಬಗಳ ಜೀವನ ಬೀದಿಗೆ ಬಿದ್ದಿದೆ. ಅಣೆಕಟ್ಟೆಯನ್ನು ಸಮರ್ಥವಾಗಿ ನಿರ್ವಹಿಸದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಬೇಜವಬ್ದಾರಿತನದಿಂದ ಮಾಧವ ಮಂತ್ರಿ ಅಣೆಕಟ್ಟೆ ಒಡೆದಿದೆ. ವಿಧಾನ ಮಂಡಲ ಅಧಿವೇಶನಗಳು ರೈತರ ಸಮಸ್ಯೆ ಕುರಿತು ಚರ್ಚಿಸದೆ ಮೋಜಿನ ಕೇಂದ್ರವಾಗಿದೆ. ಭೂ ಪರಿವರ್ತನೆ, ಹೈಟೆಕ್ ತಂತ್ರಜ್ಞಾನವುಳ್ಳ ಕೊಠಡಿಗಳು ಹಾಗೂ ಕಾರುಗಳ ಬಳಕೆ, ತಮಗೆ ಬೇಕಾದ ಸವಲತ್ತು ನೀಡುವ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್. ರಾಜಗೋಪಾಲ್, ಮುಖಂಡರಾದ ಟಿ.ಸಿ. ಮಹದೇವ, ಎಲ್. ಉಮಾಪತಿ, ರಮೇಶ್, ಕೆಂಪರಾಜು, ಗುರುಬಸಪ್ಪಸ್ವಾಮಿ, ಗೋವಿಂದೇಗೌಡ, ರಂಗೇಗೌಡ, ಶಂಕರ್, ರಂಗನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement