ಮೋಡದ ನಡುವೆ ಗಾಳಿಪಟ...
ಮೈಸೂರು: ಮೋಡ ಕವಿದ ವಾತಾವರಣ ಮಧ್ಯೆಯೂ ಗಾಳಿಪಟ ಹಾರಿಸುವವರ ಉತ್ಸಾಹ ಕುಗ್ಗಿರಲಿಲ್ಲ... ಮಕ್ಕಳು, ಹಿರಿಯರು ಎಂಬ ವಯೋವಾನದ ಯಾವುದೇ ಭೇದಭಾವ ಇಲ್ಲದೆ ಗಾಳಿ ಪಟ ಹಾರಿಸಿ ಸಂಭ್ರಮಿಸಿದರು.
ಮೈಸೂರು ವೀರಶೈವ ಸಜ್ಜನ ಸಂಘವು ಭಾನುವಾರ ಮಧ್ಯಾಹ್ನ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ 17ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ವಿವಿಧ ಬಗೆಯ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಮೋಡವಿದ್ದರೂ ಲೆಕ್ಕಿಸದೆ ಗಾಳಿಪಟ ಹಾರಿಸಿದರು.
ವಿವಿಧ ವಿಭಾಗಗಳಲ್ಲಿ ಉತ್ತಮ ಗಾಳಿಪಟಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಕರ್ನಾಟಕ ಪವರ್ ಕಾರ್ಪೋರೇಷನ್ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ. ಸುದರ್ಶನ್ ವಿಜೇತರಿಗೆ ಬಹುಮಾನ ವಿತರಿಸಿದರು.
ಮೈಸೂರು ವೀರಶೈವ ಸಜ್ಜನ ಸಂಘದ ಅಧ್ಯಕ್ಷ ಎಂ.ಎನ್. ಬಸವರಾಜ್, ಗೌರವ ಕಾರ್ಯದರ್ಶಿ ಸಾಗರ್ಕುಮಾರ್, ಉಪಾಧ್ಯಕ್ಷ ಎಂ. ಮಹದೇವ್, ಸಹ ಕಾರ್ಯದರ್ಶಿ ಬಿ. ರಮೇಶ್, ಖಜಾಂಚಿ ಎಂ.ಸಿ. ಪ್ರಾಣೇಶ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.