ರಂಗೋಲಿಯ ರಂಗುರಂಗಿನ ಚಿತ್ತಾರ...
ಮೈಸೂರು: ಮಹಿಳೆಯರ ಅಚ್ಚುಮೆಚ್ಚಿನ ಕಲೆಯೂ, ಪೂರ್ವಜರ ಪರಂಪರೆಯೂ ಆಗಿರುವ ರಂಗವಲ್ಲಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ಭಾನುವಾರ ರಂಗೋಲಿ ಸ್ಪರ್ಧೆ ನಡೆಸಿತು.
ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜಯಲಕ್ಷ್ಮೀಪುರಂನ ಕುವೆಂಪು ಟ್ರಸ್ಟ್ ವಿವೇಕಾನಂದ ಪಿಯು ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಈ ಸ್ಪರ್ಧೆಯನ್ನು ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಮೀನಾ ತೂಗದೀಪ್ ಉದ್ಘಾಟಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಸಾಹಿತಿ ಡಾ.ಎಂ.ಕನ್ನಿಕಾ, ಕೆಪಿಸಿಸಿ ಸದಸ್ಯೆ ಮಲ್ಲಿಗೆ ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ನಟ ಸೂರಜ್ಗೌಡ ವಿಶೇಷ ಆಹ್ವಾನಿತರಾಗಿದ್ದರು.
ಅಕಾಡೆಮಿ ಅಧ್ಯಕ್ಷ ಎಂ.ಎನ್. ವಿಜಯ ವೆಂಕಟೇಶ್, ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್. ಅರಸ್, ಪ್ರಧಾನ ಕಾರ್ಯದರ್ಶಿ ಜಿ.ಪಿ. ಸಿದ್ದೇಗೌಡ ಇದ್ದರು. ಸುಮರಾಜ್ಕುಮಾರ್ ಸ್ವಾಗತಿಸಿದರು. ಆಶಾ ಶಂಕರೇಗೌಡ ನಿರೂಪಿಸಿದರು. ಹೇಮ ನಂದೀಶ್ ವಂದಿಸಿದರು.
ಗಮನ ಸೆಳೆದ ಎಳೆ ರಂಗೋಲಿ: ಸ್ಪರ್ಧೆಯಲ್ಲಿ ಬಿಡಿಸಲಾಗಿದ್ದ ಚುಕ್ಕಿ ರಂಗೋಲಿ ಹಾಗೂ ಎಳೆ ರಂಗೋಲಿಗಳು ಗಮನ ಸೆಳೆದವು. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೂಡಿಸಿದ್ದ ರಂಗುರಂಗಿನ ಭಾರತ ಭೂಪಟ ಹಾಗೂ ಧ್ವಜ ಆಕರ್ಷಿಸಿತು. 40ಕ್ಕೂ ಹೆಚ್ಚಿನ ಮಕ್ಕಳು ಹಾಗೂ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.