ವಿದ್ಯುತ್ ಅವಘಡ; ಮಹಿಳೆ ಸಾವು
ಪಿರಿಯಾಪಟ್ಟಣ: ತಂಬಾಕು ಎಲೆ ಮುರಿಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮತ್ತಿಬ್ಬರಿಗೆ ವಿದ್ಯುತ್ ಶಾಕ್ ನೀಡಿರುವ ಘಟನೆ ತಾಲೂಕಿನ ನಾಗನಹಳ್ಳಿಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ನಾಗನಹಳ್ಳಿಪಾಳ್ಯ ಗ್ರಾಮದ ಸ್ವಾಮಿ ಎಂಬುವರ ಪತ್ನಿ ಪ್ರೇಮಮ್ಮ (45) ಮೃತಪಟ್ಟವರು. ಗ್ರಾಮದ ಜಮೀನೊಂದರಲ್ಲಿ ತಂಬಾಕು ಎಲೆ ಮುರಿಯುವ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಮಮ್ಮ ಅವರಿಗೆ ವಿದ್ಯುತ್ ಕಂಬದಿಂದ ಬೋರ್ವೆಲ್ಗೆ ಹಾಕಲಾಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿದೆ. ಇದರಿಂದ ನಿತ್ರಾಣಗೊಂಡ ಅವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲ ನೀಡದ ಕಾರಣ, ಪ್ರೇಮಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರೇಮಮ್ಮ ಅವರಿಗೆ ವಿದ್ಯುತ್ ಸ್ಪರ್ಶಿಸಿದ ಸಂದರ್ಭದಲ್ಲಿ ಅವರನ್ನು ಪಾರುಮಾಡಲು ಹೋರಟ ರತ್ನಮ್ಮ ಹಾಗೂ ಕುಮಾರ ಎಂಬುವರಿಗೂ ವಿದ್ಯುತ್ ಸ್ಪರ್ಶವಾಗಿದ್ದು ರತ್ನಮ್ಮ ಅವರು ಪಾರಾಗಿದ್ದಾರೆ. ಕುಮಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.