ಆಸ್ತಿಗಾಗಿ ಸಾಕುತಾಯಿಯ ಮಗನನ್ನು ಕೊಂದ ದುರುಳ
ಟಿ. ನರಸೀಪುರ: ಆಸ್ತಿಗಾಗಿ ಸಾಕು ತಾಯಿಯ ಮಗನನ್ನೇ ಸಿಮೆಂಟ್ ಇಟ್ಟಿಗೆ ಮಿಶ್ರಿತ ಗಾರೆ ತುಂಡಿನಿಂದ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮೈಸೂರಿನ ಗೌಸಿಯಾ ನಗರದ ಅಜಮ್ ಪಾಷ (21) ಎಂಬಾತನೇ ಬಂಧಿತ ಆರೋಪಿ. ಇವರು ಕಳೆದ 2012ರ ಅ.27 ರಂದು ತನ್ನ ಸಾಕು ತಾಯಿಯ ಮಗ ಮುಜಾಯಿದ್ ಪಾಷ ಎಂಬುವರನ್ನು ಗರ್ಗೇಶ್ವರಿ ಗ್ರಾಮದ ಬಳಿಯಿರುವ ಅಕ್ಕಿ ಗಿರಣಿ ಬಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಮೈಸೂರಿನ ಉದಯಗಿರಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ಅಜಮ್ ಪಾಷ, ನಗರದ ಬೀಡಿ ಕ್ವಾಟ್ರಸ್ನಲ್ಲಿ ಮನೆಯನ್ನು ತನಗೆ ಬರೆದುಕೊಡಬೇಕೆಂದು ಸಾಕು ತಾಯಿಗೆ ಒತ್ತಾಯಿಸುತ್ತಿದ್ದ. ಆಕೆಗಿದ್ದ ಮಗ ಮೃತ ಮುಜಾಯಿದ್ ಪಾಷನನ್ನು ಮುಗಿಸಿಬಿಟ್ಟರೆ, ಮನೆ ತನ್ನದಾಗುತ್ತದೆ ಎಂದು ಕಳೆದ ಬಕ್ರೀದ್ನಂದು ನರಸೀಪುರದ ತಿರುಮಕೂಡಲಿಗೆ ಸಹೋದರನನ್ನು ಕರೆದೊಯ್ದು ಕಂಠಪೂರ್ತಿ ಮದ್ಯ ಕುಡಿಸಿ ಗಾರೆಯ ತುಂಡಿನಿಂದ ತಲೆಯನ್ನು ಜಜ್ಜಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣೆ ಸಿಪಿಐ ಅಶೋಕ್ ಅವರ ಸಹಾಯದಿಂದ ನರಸೀಪುರ ಸಿಪಿಐ ಕೆ.ಎಸ್. ಸುಂದರರಾಜ್, ಪಿಎಸ್ಐ ಕೆ.ಆರ್. ಗೋಪಿಕೃಷ್ಣ, ಎಎಸ್ಐ ಲಿಂಗರಾಜು ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.