ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಕಾವಾದಲ್ಲಿ ಕಲಾ ಪ್ರದರ್ಶನ

Rashmi Kasaragodu
Updated On : 13 Aug 2013, 11:51 am

ಮೈಸೂರು: ಕಲಾವಿದ ಪ್ರೊ.ಎಂ.ಎಸ್. ನಂಜುಂಡರಾವ್ ಕುರಿತಾದ ಚಿತ್ರಕಲಾ ಪ್ರದರ್ಶನವನ್ನು ನಗರದ ಸಯ್ಯಾಜಿರಾವ್ ರಸ್ತೆಯ ಕಾವಾದ ಆರ್ಟ್ ಗ್ಯಾಲರಿಯಲ್ಲಿ ಆ.13 ರಂದು ಏರ್ಪಡಿಸಲಾಗಿದೆ. ಪ್ರೊ.ಎಂ.ಎಸ್. ನಂಜುಂಡರಾವ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಹಾಗೂ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಸಂಯುಕಾಶ್ರಯದಲ್ಲಿ ನಂ. ನಾಗಲಕ್ಷ್ಮಿ ಅವರು ರಚಿಸಿರುವ ಪ್ರೊ.ಎಂ.ಎಸ್. ನಂಜುಂಡರಾವ್ ಜೀವನ ಚರಿತ್ರೆ ಕುರಿತಾದ ಅನನ್ಯ ಕಲಾಸಾರಥಿ ನಂಜುಂಡರಾವ್ ಕಲಾ ಪ್ರದರ್ಶನವನ್ನು ಏರ್ಪಡಿಸಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್. ರವಿಶಂಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ಸಂಜೆ 4ಕ್ಕೆ ರಾಮಸನ್ಸ್ ಕಲಾ ಪ್ರತಿಷ್ಠಾನ ಕಾರ್ಯನಿರ್ವಾಹಕ ಟ್ರಸ್ಟ್ ಎಂ.ಬಿ. ಸಿಂಗ್ ಉದ್ಘಾಟಿಸುವರು. ಕಾರ್ಯದರ್ಶಿ ಆರ್.ಜಿ. ಸಿಂಗ್ ಹಾಗೂ ಕಲಾವಿದರಾದ ಗಂಜೀಫ ರಘುಪತಿ ಭಟ್ ಹಾಗೂ ನಂ. ನಾಗಲಕ್ಷ್ಮಿ ಭಾಗವಹಿಸುವರು ಎಂದರು.

ಮರಗಳನ್ನು ಉಳಿಸಿ: ತಮ್ಮಯ್ಯ
ಮೈಸೂರು:
ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳು ಬೆಳೆದು ನಿಂತಿವೆ. ದುರ್ದೈವ ಎಂದರೆ ಕೆಲವರು ಮರದ ಚೆಕ್ಕೆಗಳನ್ನು ತೆಗೆದು ಒಣಗುವಂತೆ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ನಿವೃತ್ತ ನೌಕರ ತಮ್ಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಸರಸ್ವತಿಪುರಂ 1ನೇ ತಿರುವಿನಲ್ಲಿರುವ ಮರಗಳಿಗೆ ಈ ದುರ್ಗತಿ ಬಂದಿದೆ. ಹಾಗೆ ಅಶೋಕ ವೃತ್ತದ ತಿರುವಿನಲ್ಲಿ ಮರಗಳಿದ್ದು, ಇವು ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಮರಗಳನ್ನು ತೆಗೆಸಿ ಅದರ ಪಕ್ಕದಲ್ಲಿ ಮಹಾಗನಿ ಗಿಡಗಳನ್ನು, ಹೊಂಗೆ ಗಿಡಗಳನ್ನು ನೆಡಸಿ ಹಳೆಯ ಮರಗಳ ರಂಬೆಗಳನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ
ಮಂಡ್ಯ: 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಸಾಧಾರಣ ಶೌರ್ಯ- ಸಾಹಸ ಪ್ರದರ್ಶಿಸಿದ 6 ರಿಂದ 15 ವರ್ಷದೊಳಗಿನ ಬಾಲಕರಿಗೆ ಹೊಯ್ಸಳ ಪ್ರಶಸ್ತಿ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲು 2013-14 ನೇ ಸಾಲಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಅಸಾಧಾರಣ ಧೈರ್ಯ -ಸಾಹಸ ಪ್ರದರ್ಶಿಸಿದ ಬಾಲಕ- ಬಾಲಕಿಯರು ವೈಯುಕ್ತಿಕ ವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಆ.31 ರೊಳಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಚೇರಿ ಆವರಣ, ಮಂಡ್ಯ ಇವರಿಗೆ ದ್ವಿಪ್ರತಿಯಲ್ಲಿ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ವಿವರಗಳಿಗೆ ದೂ. 08232-227336 ಸಂಪರ್ಕಿಸಬಹುದು ಎಂದು ಇಲಾಖೆ ಉಪನಿರ್ದೇಶಕಿ ಬಿ.ವಿಮಲಾ ತಿಳಿಸಿದ್ದಾರೆ.

ಮಚ್ಚಿನಿಂದ ಕೊಚ್ಚಿ ಬರ್ಬರ ಕೊಲೆ
ಟಿ.ನರಸೀಪುರ:
ತಾಯಿಯ ಸಾವಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನೇ ಕಾರಣನಾದನೆಂದು ಭಾವಿಸಿದ ಅಪ್ರಾಪ್ತ ಯುವಕನೋರ್ವ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕುಪ್ಯ ಗ್ರಾಮದಲ್ಲಿ ನಡೆದಿದೆ. ಕುಪ್ಯ ಗ್ರಾಮದ ಲೇಟ್ ಮರಿಸಿದ್ದಯ್ಯ ಎಂಬುವರ ಪುತ್ರ ಪ್ರಕಾಶ (43) ಉರುಫ್ ಬಕಾಶಿ ಕೊಲೆಯಾದವರು. ಅದೇ ಗ್ರಾಮದ ಕರಿಯಪ್ಪ ಎಂಬುವರ ಪುತ್ರ ಸುರೇಶ (17) ಎಂಬಾತ ತನ್ನ ತಾಯಿ ರಾಜಮಣಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಕಾಶ ಜತೆಗಿನ ಅನೈತಿಕ ಸಂಬಂಧ ಪ್ರಮುಖ ಕಾರಣವೆಂದು ಮಚ್ಚಿನಿಂದ ಆತನನ್ನು ಕಳೆದ ಆ.10ರ ಶನಿವಾರ ರಾತ್ರಿ ಹತ್ಯೆ ಮಾಡಿದ್ದಾನೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದಿಂದ ಭಾನುವಾರ ಕುಪ್ಯ ಗ್ರಾಮಕ್ಕೆ ಆಗಮಿಸಿದ ಹೇಮಾವತಿ ಅವರು ಪತಿ ಪ್ರಕಾಶ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಗ್ರಾಮದ ತಮ್ಮ ಜಮೀನಿನ ಬಳಿಯಿರುವ ಅಡ್ಡಹಳ್ಳದಲ್ಲಿ ಕೊಲೆಯಾಗಿದ್ದ ಪ್ರಕಾಶನ ಶವ ಸಂಜೆ ದೊರೆತಿದೆ. ತಕ್ಷಣ ಪಟ್ಟಣದ ಪೊಲೀಸರಿಗೆ ತಿಳಿಸಿದ್ದಾರೆ.ಅಪ್ರಾಪ್ತನೆಂದು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement