ನೀರಿಗಾಗಿ ಬೀದಿಗಿಳಿದ ಬನ್ನೂರು ರೈತರು
ಜೆ. ಮಹದೇವ
ಕ.ಪ್ರ.ವಾರ್ತೆ ಬನ್ನೂರು ಆ. 12
ಕನ್ನಡನಾಡಿನ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕೆಆರ್ಎಸ್ನಿಂದ ಹಲವು ನಾಲೆಗಳಿಗೆ ನೀರು ಹರಿಸಲಾಗಿದೆ. ವಿಶ್ವೇಶ್ವರ ನಾಲೆ ವಿಭಾಗದಲ್ಲಿ ಸಾಕಷ್ಟು ನೀರು ಹರಿಸಿದ್ದರೂ ಅದು ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪುತ್ತಿಲ್ಲ. ಇದರಿಂದ ಕುಪಿತಗೊಂಡ ಬನ್ನೂರು ರೈತರು ಸೋಮವಾರ ಸರ್ಕಾರದ ನಿರ್ಲಕ್ಷ್ಯತೆಯ ವಿರುದ್ಧ ಧ್ವನಿ ಮೊಳಗಿಸಿದರು.
ಬನ್ನೂರು ಸುತ್ತಮುತ್ತಲ ಪ್ರದೇಶಗಳಿಗೆ ಆಶ್ರಯವಾಗಿದ್ದ ಹೆಗ್ಗೆರೆ ಕೆರೆ ತುಂಬಿಲ್ಲ. ವಿಶ್ವೇಶ್ವರ ನಾಲೆ ವಿಭಾಗದ ಹಳೇ ಚಿಕ್ಕದೇವರಾಯನ ನಾಲಾ ಮೂಲಕ ಹೆಗ್ಗೆರೆ ಕೆರೆಗೆ ಹರಿದು ಬರಬೇಕಿದ್ದ ನೀರಿಗೆ ಹೂಳು ಗೋಳಾಗಿ ಪರಿಣಮಿಸಿದೆ. ಮುಂಗಾರು ಆರಂಭವಾಗಿ ಜಲಾಯಶಗಳು ಭರ್ತಿಯಾಗಿದ್ದರೂ ರೈತರ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಇವರ ಸೋಮಾರಿತನ ವಿರುದ್ಧ ಕಳೆದ ಒಂದು ತಿಂಗಳಿಂದ ಹೋರಾಟ ನಡೆಸುತ್ತಿದ್ದ ರೈತ ಸಂಘ ಸೋಮವಾರ ಬನ್ನೂರು ಬಂದ್ಗೆ ಕರೆ ಕೊಟ್ಟಿತ್ತು.
ಬನ್ನೂರು ಹೆಗ್ಗೆರೆ ನೀರು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬನ್ನೂರು ಬಂದ್ ಮತ್ತು ರಸ್ತೆ ತಡೆ ಚಳವಳಿ ಭಾಗಶಃ ಯಶಸ್ವಿಯಾಯಿತು. ಬೆಳಗ್ಗೆಯಿಂದಲೆ ಅಂಗಡಿ, ಮುಂಗಟ್ಟು ಮುಚ್ಚಿ ಸಾರ್ವಜನಿಕರು ರೈತರ ಹೋರಾಟಕ್ಕೆ ದನಿಗೂಡಿಸಿದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಹೋರಾಟದಲ್ಲಿ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ರಾಜ್ಯ ರೈತ ಸಂಘದ ಮುಖಂಡ ನಂಜುಂಡೇಗೌಡ ಸೇರಿದಂತೆ ಸ್ಥಳೀಯ ಮುಖಂಡರು ಮುಂದಾಳತ್ವ ವಹಿಸಿದ್ದರು. ಸಂತೇಮಾಳದ ಬಸವೇಶ್ವರ ವೃತ್ತದಿಂದ ಆರಂಭವಾದ ಜಾಥಾ ಕಾವೇರಿ ಸರ್ಕಲ್ ವರೆಗೆ ಬಂದು ತಲುಪಿತು.
ಸ್ಥಳೀಯ ಶಾಸಕರ ವಿರುದ್ಧ ಕಿಡಿ: ಲೋಕೋಪಯೋಗಿ ಸಚಿವರಾಗಿರುವ ಡಾ.ಎಚ್.ಸಿ. ಮಹದೇವಪ್ಪ ಅವರ ವಿಧಾನಸಭಾ ವ್ಯಾಪ್ತಿಗೆ ಬನ್ನೂರು ಪುರಸಭೆ ಬರುತ್ತದೆ. ಆದರೆ, ಸ್ಥಳೀಯರಾಗಿದ್ದು ಕೂಡ ಹೆಗ್ಗೆರೆ ಕೆರೆಗೆ ನೀರು ತುಂಬಿಸಲು ಯತ್ನಿಸದ ಸಚಿವರ ವರ್ತನೆಯನ್ನು ರೈತರು ಖಂಡಿಸಿದರು. ಸಚಿವರು ಹೆಗ್ಗೆರೆ ಕೆರೆ ಇರುವುದೇ ಗೊತ್ತಿಲ್ಲ ಎಂಬ ಉದಾಸೀನ ಹೇಳಿಕೆ ನೀಡಿದ್ದು ನಾಚಿಕೆಗೇಡು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ ಮಾತನಾಡಿ, ಕೆಆರ್ಎಸ್ನಲ್ಲಿ ನೀರಿನ ಮಟ್ಟ 85 ಅಡಿ ಇದ್ದಾಗಲೂ ಈ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ರೈತರು ಈ ಕೆರೆಯಿಂದ ನೀರು ಪಡೆದುಕೊಂಡು ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬಿಗಡಾಯಿಸಿದೆ. ನೀರಿಗಾಗಿ ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸಚಿವರು ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯ ರೈತ ಸಂಘದ ಮುಖಂಡ ಅಶ್ವತ್ಥನಾರಾಯಣ ರಾಜೇ ಅರಸ್ ಮಾತನಾಡಿ, ನಾವು ಈಗ ರಾಜಕೀಯದ ಬಗ್ಗೆ ಮಾತನಾಡುವುದು ಬೇಡ. ನಮಗೆ ನೀರು ಬೇಕು ಅಷ್ಟೆ. ಯಾವ ಶಾಸಕರು ಆಯ್ಕೆ ಆಗಿ ಬಂದರೂ ಇದೇ ಕಥೆ. ಹಾಗಾಗಿ ನಾವು ಸಂಬಂಧಪಟ್ಟ ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡು ನೀರು ಬಿಡಿಸಿಕೊಳ್ಳುವ ಕಡೆಗೆ ಚಿಂತಿಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಸ್ಥಳೀಯ ಮುಖಂಡರಾದ ಬಸವಯ್ಯ, ಸಿದ್ದೇಗೌಡ, ಜ್ಞಾನಪ್ರಕಾಶ್, ಬಾಬು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಹತ್ತೂರಿಗೆ ಹೆಮ್ಮೆಯ ಹೆಗ್ಗೆರೆ ಕೆರೆ
ಪಟ್ಟಣದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಮುನ್ನೂರು ವರ್ಷಗಳಷ್ಟು ಹಳೆಯದಾದ ಹೆಗ್ಗೆರೆ ಕೆರೆ ಸುತ್ತಮುತ್ತ ರೈತರ ಜೀವನಾಡಿಯಾಗಿದೆ. ಅಂದಾಜು 900 ಎಕರೆಯಷ್ಟು ವಿಶಾಲತೆ ಹೊಂದಿರುವ ಹೆಗ್ಗೆರೆ ಕೆರೆಯು 14.5 ಅಡಿಯಷ್ಟು ನೀರಿನ ಪ್ರಮಾಣವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಕೆರೆಗೆ ಮೂರು ಗೇಟುಗಳಿದ್ದು, ಮೊದಲನೇ ಗೇಟಿನಿಂದ ಹರಿಯುವ ನೀರು ಬನ್ನೂರು ಬಯಲು ಪ್ರದೇಶ, ಕಂಚನಹಳ್ಳಿ, ಸಾಣೇಪತಹಳ್ಳಿ, ಗಾಣಿಕೊಪ್ಪ ಗ್ರಾಮಗಳಿಗೆ ತಲುಪಲಿದೆ. ಎರಡನೇ ಗೇಟಿನಿಂದ ಹರಿಯುವ ನೀರು ಬೀಡನಹಳ್ಳಿ, ಚಾಮರನಹಳ್ಳಿ, ಅತ್ತಹಳ್ಳಿ, ಬೆಟ್ಟದಹಳ್ಳಿ, ಕುಂಚನಹಳ್ಳಿ, ಮೇಗಳಕೊಪ್ಪಲು, ಬೇವನಹಳ್ಳಿ, ಕಗ್ಗಲೀಪುರ, ಕೇತುಪುರ, ಕೆಬ್ಬೆ, ಸೋಸಲೆ ಕಡೆಗೆ ಹಾಗೂ ಮೂರನೇ ಗೇಟಿನಿಂದ ಹರಿಯುವ ನೀರು ಬನ್ನೂರು ಬಯಲು ಪ್ರದೇಶ, ಉಕ್ಕಲಗೆರೆ, ತಲಕಾಡು ಕಡೆ ಹರಿಯಲಿದೆ. ಈ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಎಕರೆಯಷ್ಟು ಅಚ್ಚುಕಟ್ಟು ಪ್ರದೇಶವಿದೆ. ಇಲ್ಲಿನ ರೈತರು ಬತ್ತ, ಕಬ್ಬು, ತರಕಾರಿ ಇತ್ಯಾದಿ ಬೆಳೆ ಬೆಳೆಯುತ್ತಾರೆ. ಈಗ ಕೆಆರ್ಎಸ್ನಿಂದ ವಿಶ್ವೇಶ್ವರನಾಲೆಗೆ ನೀರು ಹರಿಸಲಾಗಿದೆ. ಕಾಲುವೆಯಲ್ಲಿ ಯಥೇಚ್ಛವಾಗಿ ಹೂಳು ತುಂಬಿರುವುದರಿಂದ ಕೆರೆ ನೀರು ಹರಿಯುತ್ತಿಲ್ಲ. ಕೆರೆಯಲ್ಲಿ ಕೇವಲ ನಾಲ್ಕೂವರೆ ಅಡಿಯಷ್ಟು ನೀರು ನಿಂತಿದೆ. ಕಳೆದ ಮೂರು ವರ್ಷಗಳಿಂದ ಬರದಿಂದ ತತ್ತರಿಸಿದ್ದ ರೈತ ಸಮೂಹ ಈ ಬಾರಿ ಅದೇ ರೀತಿ ಸಂಕಟಪಡಬೇಕಿದೆ.
ರೈತರ ಹೋರಾಟಕ್ಕೆ ಬೆಂಬಲ: ಹೆಗ್ಗೆರೆ ಕೆರೆಗೆ ನೀರು ಹರಿಸುವಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಪಟ್ಟಣದ ವನಿತಾ ಮಹಿಳಾ ಸಮಾಜ ಬೆಂಬಲ ಸೂಚಿಸಿದೆ.
ತಮ್ಮ ಹೊಲ ಗದ್ದೆಗಳಿಗೆ ನೀರಿಲ್ಲದೆ ರೈತ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇದೆ. ಈ ಸಂಕಷ್ಟದಿಂದ ಪಾರಾಗಲು ಹಲವು ಮಂದಿ ಗುಳೆ ಹೋಗುತ್ತಿದ್ದಾರೆ. ಆಡಳಿತರೂಢ ಸರ್ಕಾರ ಮಾತ್ರ ಸುಮ್ಮನಿದೆ. ಈಗಿನ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಮಾಜದ ಅಧ್ಯಕ್ಷೆ ಜಿ. ವರಲಕ್ಷ್ಮೀ ಖಂಡಿಸಿದ್ದಾರೆ