ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ
ಕ.ಪ್ರ.ವಾರ್ತೆ ತಾಂಡವಪುರ ಆ. 12
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 66ನೇ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಕಾಂಗ್ರೆಸ್ ಮುಖಂಡರು ಸೋಮವಾರ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಗಣಪತಿಗೆ ಬೆಣ್ಣೆ ಸೇವೆ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿದರು.
ತಾಪಂ ಸದಸ್ಯ ಗೋವಿಂದರಾಜನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಅಡೆತಡೆ ಇಲ್ಲದೆ ಐದು ವರ್ಷಗಳ ಕಾಲ ಸರ್ಕಾರ ನಡೆಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಮತ್ತು ಶ್ರೀಕಂಠೇಶ್ವರ ಸ್ವಾಮಿ ಕರುಣಿಸಲಿ. ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ತೀರ ಕಡುಬಡವರಿಗೆ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಕೆ.ಮಾರುತಿ, ರೇವಮ್ಮ ಟಿ.ಕೆ ಮಾಲೇಗೌಡ, ಗೀತಾ ಧರ್ಮೇಂದ್ರ ರಾಜು, ತಾಪಂ ಸದಸ್ಯರಾದ ಶ್ರೀಕಂಠು, ಹೊರಳವಾಡಿ ಎಂ.ಆರ್. ಪುಟ್ಟಸ್ವಾಮಿ, ಕೆಂಪಣ್ಣ, ರಾಜಮ್ಮ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ, ಬಿಲಿಗೆರೆ ನಂಜುಂಡ, ಬಸವೇಗೌಡ, ಅರ್ಕೇಶ್ ಅಣ್ಣಯ್ಯ, ಚಂದ್ರಶೇಖರ್, ಡಾ. ವಿಜಯಕುಮಾರ್ ಇದ್ದರು.