ಸತ್ಪ್ರಜೆಗಳಾಗಲು ವಿದ್ಯಾರ್ಥಿಗಳಿಗೆ ಕರೆ
ಕ.ಪ್ರ.ವಾರ್ತೆ ಮೈಸೂರು ಆ. 12
ದೇಶಕ್ಕೆ ಸತ್ಪ್ರಜೆಗಳಾಗುವಂತೆ ಮತ್ತು ಬಡಾವಣೆಯನ್ನು ಸ್ವಚ್ಛವಾಗಿಡುವಂತೆ ವಿದ್ಯಾರ್ಥಿಗಳಿಗೆ ನಗರಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ ಕರೆ ನೀಡಿದರು.
ಜೆ.ಪಿ. ನಗರದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಎನ್ಎಸ್ಎಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಎನ್ಎಸ್ಎಸ್ ಕಾರ್ಯಕರ್ತನಾಗಿದ್ದೆ. ಆದ್ದರಿಂದ ಈ ಕಾರ್ಯದ ಮಹತ್ವ ಅರಿತು ದುಡಿದು ಇಂದು ಜನಪ್ರತಿನಿಧಿಯಾಗಿದ್ದೇನೆ. ನೀವು ಸಹ ನನಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಬೇಕೆಂದು ಆಶಿಸಿದರು.
ಪ್ರಾಂಶುಪಾಲೆ ಉಮಾಮಹೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್.ಎಂ. ಮಹದೇವಪ್ಪ ಎನ್ಎಸ್ಎಸ್ ಗೀತೆ ಮತ್ತು ಕರ್ನಾಟಕ ಗೀತೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ವರಿ, ಹರಪ್ರಸಾದ್ ಇದ್ದರು. ಎನ್ಎಸ್ಎಸ್ ಅಧಿಕಾರಿ ಎಚ್.ಎನ್. ನಾಗರಾಜು ಸ್ವಾಗತಿಸಿದರು. ಎಸ್.ಎಂ. ಗುರುಪಾದಪ್ಪ ನಿರೂಪಿಸಿದರು. ನಿರಂಜನ್ ವಂದಿಸಿದರು.