ಅಂತರ್ಜಾತಿ ವಿವಾಹ: ಗರ್ಭಿಣಿ ಮಗಳನ್ನೇ ಅಪಹರಿಸಿದರು!
ಮೈಸೂರು: ಅಂತರ್ಜಾತಿ ವಿವಾಹವಾಗಿರುವ ಮಗಳನ್ನು ಹೆತ್ತವರೇ ಅಪಹರಿಸಿಕೊಂಡು ಹೋಗಿರುವ ಘಟನೆ ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಅಶೋಕಪುರಂ ನಿವಾಸಿ ಸುಭಾಷ್ (27) ಮತ್ತು ಜಯನಗರ ನಿವಾಸಿ ಅಕ್ಷತಾ (20) ಪರಸ್ಪರ 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರ ವಿವಾಹಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ 4 ತಿಂಗಳ ಹಿಂದೆ ಸುಭಾಷ್ ಮತ್ತು ಅಕ್ಷತಾ ಮನೆ ಬಿಟ್ಟು ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು.
ಈ ಮದುವೆಯನ್ನು ಸುಭಾಷ್ ಪೋಷಕರು ಒಪ್ಪಿಕೊಂಡರು, ಅಲ್ಲದೆ ಆರತಕ್ಷತೆ ಕಾರ್ಯಕ್ರಮ ಸಹ ಆಯೋಜಿಸಿದ್ದರು. ಇದಾದ ಬಳಿಕ ತಮ್ಮ ಮಗಳನ್ನು ವಾಪಸ್ ಕಳುಹಿಸುವಂತೆ ಅಕ್ಷತಾ ಪೋಷಕರು ಆಗಾಗ ಕೇಳುತ್ತಿದ್ದರು. ಆದರೆ, ಇದಕ್ಕೆ ಸುಭಾಷ್ ಕುಟುಂಬ ಒಪ್ಪಿರಲಿಲ್ಲ. ಸೋಮವಾರ ಮಧ್ಯಾಹ್ನ 3 ತಿಂಗಳ ಗರ್ಭವತಿಯಾದ ಅಕ್ಷತಾ ಅವರನ್ನು ಸುಭಾಷ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಲಕ್ಷ್ಮಿ ಚಿತ್ರಮಂದಿರ ಸಮೀಪದಲ್ಲಿ ಕಾರಿನಲ್ಲಿ ಬಂದ ಅಕ್ಷತಾ ತಂದೆ ಶ್ರೀನಿವಾಸ್, ತಾಯಿ ಹೇಮಾ, ಚಿಕ್ಕಪ್ಪ ಗೋವಿಂದ ಹಾಗೂ ಮತ್ತಿಬ್ಬರು ಸುಭಾಷ್ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಅಕ್ಷತಾಳನ್ನು ಅಪಹರಿಸಿಕೊಂಡು ಹೋಗಿದ್ದಾರೆ.
ಹಲ್ಲೆಗೊಳಗಾದ ಸುಭಾಷ್ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆ.ಆರ್. ಠಾಣೆ ಪೊಲೀಸರು ಅಪಹರಣ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.