ಅತಿವೃಷ್ಟಿಗೆ ಶೇ. 50 ಬೆಳೆಹಾನಿ ಸಂಭವ
ಕ.ಪ್ರ.ವಾರ್ತೆ ಮೈಸೂರು ಆ. 13
ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ಪೂರ್ಣ, ಬಿ. ಮಟಕೆರೆ ಮತ್ತು ಕಸಬಾ ಹೋಬಳಿಯ ಕಾಡಂಚಿನ ಪ್ರದೇಶದಲ್ಲಿ ಅಧಿಕ ಮಳೆಯಿಂದ ಭೂಮಿಯಲ್ಲಿ ನೀರಿನ ತೇವಾಂಶ ಅಧಿಕಗೊಂಡು ಹಾಲಿ ಕಟಾವು ಹಂತದಲ್ಲಿರುವ ದ್ವಿದಳ ಧಾನ್ಯ ಬೆಳೆಗಳು, ಹೂವು ಮತ್ತು ಎಳೆ ಕಾಯಿಗಳ ಹಂತದಲ್ಲಿರುವ ಹತ್ತಿ ಬೆಳೆಗಳಲ್ಲಿ ಹಾಗೂ ಹೊಗೆಸೊಪ್ಪು ಬೆಳೆಗಳಲ್ಲಿ ಶೇ. 55- 60 ಭಾಗ ಇಳುವರಿಯಲ್ಲಿ ನಷ್ಟವಾಗುವ ಸಂಭವವಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹೇಳಿದ್ದಾರೆ.
ಹುಣಸೂರು ತಾಲೂಕು ಹನಗೋಡು ಹೋಬಳಿಯ ಕೆಲವು ಗ್ರಾಮಗಳಲ್ಲಿ ಹೆಚ್ಚಿನ ಮಳೆಯಿಂದ ಮುಸುಕಿನಜೋಳ, ಹೊಗೆಸೊಪ್ಪು, ಸ್ವಲ್ಪ ಭಾಗ ಹತ್ತಿ ಬೆಳೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಇಳುವರಿಯಲ್ಲಿ ನಷ್ಟವಾಗುವ ಸಂಭವವಿದೆ.
ಪಿರಿಯಾಪಟ್ಟಣ ತಾಲೂಕಿನಲ್ಲೂ ಕೂಡ ಹಾರನಹಳ್ಳಿ ಹೋಬಳಿ ಪೂರ್ಣ, ಕಸಬಾ ಮತ್ತು ಬೆಟ್ಟದಪುರ ಹೋಬಳಿಯ ಕೆಲವು ಗ್ರಾಮಗಳಲ್ಲಿ ಅಧಿಕ ಮಳೆಯಿಂದ ಭೂಮಿಯಲ್ಲಿ ನೀರಿನ ತೇವಾಂಶ ಅಧಿಕಗೊಂಡು ಹಾಲಿ ಇರುವ ಹೊಗೆಸೊಪ್ಪು ಮತ್ತು ಮುಸುಕಿನಜೋಳದ ಬೆಳೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಇಳುವರಿಯಲ್ಲಿ ನಷ್ಟವಾಗುವ ಸಂಭವವಿದೆ.
ಬರದ ಛಾಯೆ: ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದೊಡ್ಡಮಾರಗೌಡನಹಳ್ಳಿ ಪಂಚಾಯಿತಿಯ ಕೆಲವು ಗ್ರಾಮಗಳನ್ನು ಹೊರತುಪಡಿಸಿ ಉಳಿದ ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ತೇವಾಂಶದ ಕೊರತೆಯಿಂದಾಗಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಜೋಳ, ಮುಸುಕಿನಜೋಳ, ಅಲಸಂದೆ, ಉದ್ದು, ಹೆಸರು ಮತ್ತು ಎಳ್ಳು ಬೆಳೆಗಳು ಬೆಳವಣಿಗೆ ಕುಂಠಿತಗೊಂಡು ಶೇ. 60ಕ್ಕಿಂತ ಹೆಚ್ಚು ಇಳುವರಿಯಲ್ಲಿ ನಷ್ಟವಾಗಿದೆ.
ಮಳೆ- ಬೆಳೆ ವಿವರ: 2013ನೇ ಸಾಲಿನ ಆಗಸ್ಟ್ ಮಾಹೆಯ ಈವರೆಗಿನ ಸಂಚಿತ ವಾಡಿಕೆ ಮಳೆ 429.3 ಮಿಮೀ ಇದ್ದು, ವಾಸ್ತವವಾಗಿ 479.8 (ಶೇ. 112) ಮಿಮೀ ಮಳೆಯಾಗಿದೆ. ಆಗಸ್ಟ್ ತಿಂಗಳ ಈವರೆಗಿನ ವಾಡಿಕೆ ಮಳೆ 29.6 ಮಿಮೀ ಇದ್ದು, ವಾಸ್ತವವಾಗಿ 44.6 (ಶೇ. 151) ಮಿಮೀ ಮಳೆಯಾಗಿದೆ. ಒಟ್ಟಾರೆ ಎಚ್.ಡಿ. ಕೋಟೆ, ನಂಜನಗೂಡು ಮತ್ತು ಪಿರಿಯಾಪಟ್ಟಣ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
2013- 14ರ ಮುಂಗಾರಿಗೆ 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯುವ ಗುರಿಯಿದ್ದು, ಈವರೆಗೆ ಈ ಪ್ರದೇಶದಲ್ಲಿ 2,65,552 ಹೆ. (ಶೇ. 63) ಬಿತ್ತನೆಯಾಗಿದೆ. ಮಳೆ ಆಶ್ರಯದಲ್ಲಿ 3,01,960 ಹೆಕ್ಟೇರ್ ಗುರಿಯಿದ್ದು, ಈ ಪ್ರದೇಶದಲ್ಲಿ 2,44,169 ಹೆಕ್ಟೇರ್ (ಶೇ. 81) ಬಿತ್ತನೆಯಾಗಿದೆ.
ನೀರಾವರಿಯಲ್ಲಿ 1,18,235 ಹೆಕ್ಟೇರ್ ಗುರಿಯಿದ್ದು, ಈ ಪ್ರದೇಶದಲ್ಲಿ 21,383 ಹೆಕ್ಟೇರ್ (ಶೇ. 18) ಬಿತ್ತನೆಯಾಗಿದೆ.
2013- 14ರ ಮುಂಗಾರಿನಲ್ಲಿ ಮಳೆಯಾಗಿರುವ ಪ್ರದೇಶದಲ್ಲಿ ಭೂಮಿ ತಯಾರಿ ಮತ್ತು ಮುಖ್ಯ ಭೂಮಿ ಸಿದ್ಧತೆ ಕಾರ್ಯ ಮುಂದುವರಿದಿದೆ. ಬತ್ತದಲ್ಲಿ ನಾಟಿ ಕಾರ್ಯ ಮುಂದುವರಿದಿದೆ. ಹೈಬ್ರಿಡ್ ಜೋಳ ಬೆಳವಣಿಗೆ ಹೊಡೆ, ಹಾಲು ತುಂಬುವ ಮತ್ತು ಕಾಳು ಬಲಿಯುವ ಹಂತ, ಎಳ್ಳು ಕಾಳು ಬಲಿಯುವ ಮತ್ತು ಕಟಾವು, ದ್ವಿದಳ ಧಾನ್ಯಗಳು, ಕಾಳು ಮತ್ತು ಕಟಾವು ನಡೆಯುತ್ತಿದೆ. ಹತ್ತಿ ಬೆಳವಣಿಗೆ, ಮೊಗ್ಗು, ಹೂವು ಮತ್ತು ಕಾಯಿ ಬಲಿಯುವ ಹಂತದಲ್ಲಿದೆ. ರಾಗಿ ಸಸಿಮಡಿ, ನಾಟಿ, ಬೆಳವಣಿಗೆ ಹಾಗು ಹೊಡೆ ಹಂತ, ಮುಸುಕಿನಜೋಳ ಬಿತ್ತನೆ, ಬೆಳವಣಿಗೆ, ಮೋತೆ ಮತ್ತು ಕಾಳು ಬಲಿಯುವ ಹಂತ, ನೆಲಗಡಲೆ ಬಿತ್ತನೆ, ಬೆಳವಣಿಗೆ, ಬೀಳು ಬಿಡುವ ಹಾಗು ಕಾಯಿ ಬಲಿಯುವ ಹಂತ, ಸೂರ್ಯಕಾಂತಿ ಹೂ, ಕಾಳು ಕಟ್ಟುವ ಮತ್ತು ಕಾಳು ಮಾಗುವ ಹಂತ, ಹರಳು ಬೆಳವಣಿಗೆ, ಹೂ ಮತ್ತು ಗೊನೆ ಬಲಿಯುವ ಹಂತದಲ್ಲಿದೆ. ಹೊಗೆಸೊಪ್ಪು ಬೆಳವಣಿಗೆ, ಹೂ, ಎಲೆ ಕಟಾವು ಮತ್ತು ಹದ ಮಾಡುವ ಹಂತದಲ್ಲಿದೆ, ಕಬ್ಬು ವಿವಿಧ ಹಂತದಲ್ಲಿದೆ.
ಕೀಟ, ರೋಗ ಬಾಧೆ: ಅಲ್ಲಲ್ಲಿ ದ್ವಿದಳ ಧಾನ್ಯ ಬೆಳೆಗಳಲ್ಲಿ ಹೇನು ಮತ್ತು ಹಳದಿನಂಜುರೋಗ ಬಾಧೆ, ಹತ್ತಿ ಬೆಳೆಗಳಲ್ಲಿ ರಸ ಹೀರುವ ಕೀಟ ಬಾಧೆ, ಬತ್ತದ ಸಸಿ ಮಡಿಯಲ್ಲಿ ಬೆಂಕಿರೋಗ ಹಾಗು ಜಂತುರೋಗ (ನೆಮಟೋಡ್) ಬಾಧೆ ಕಂಡು ಬಂದಿದ್ದು, ಹತೋಟಿಗೆ ಸೂಕ್ತ ಸಿಂಪರಣೆ ಕೈಗೊಳ್ಳಲು ಕ್ರಮವಹಿಸಿದೆ.
ಬಿತ್ತನೆ ಬೀಜ, ರಸಗೊಬ್ಬರ ವಿತರಣೆ
2013- 14ರ ಮುಂಗಾರು ಹಂಗಾಮಿನಲ್ಲಿ (ಎಸ್ಆರ್ಆರ್ ಪ್ರಕಾರ) 30,421 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲು ಗುರಿ ಹೊಂದಿದ್ದು, ಬತ್ತ, ಹೈಬ್ರಿಡ್ ಜೋಳ ಮತ್ತು ದ್ವಿದಳ ಧಾನ್ಯ ಧೃಡೀಕೃತ ಬಿತ್ತನೆ ಬೀಜಗಳು 29,440 ಕ್ವಿಂ. ಸರಬರಾಜಾಗಿದ್ದು, ಒಟ್ಟಾರೆ 18,248 ಕ್ವಿಂಟಲ್. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಯಾಗಿರುತ್ತದೆ.
ಕೆಎಸ್ಎಸ್ಸಿ, ಎನ್ಎಸ್ಸಿ ಮತ್ತು ಖಾಸಗಿಯವರಲ್ಲಿ ಒಟ್ಟಾರೆ ವಿವಿಧ ಬಿತ್ತನೆ ಬೀಜಗಳ ಲಭ್ಯತೆ 16,231 ಕ್ವಿಂಟಲ್ ಇದೆ.
ಮುಂಗಾರು ಹಂಗಾಮಿಗೆ 96,300 ಮೆ.ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮತ್ತು ಖಾಸಗಿಯವರಿಂದ ಒಟ್ಟಾರೆ ಪ್ರಾರಂಭಿಕ ದಾಸ್ತಾನು ಸೇರಿ 72,594 ಮೆ.ಟನ್ ಸರಬರಾಜಾಗಿದೆ.
ಈ ವರೆಗೆ 52,669 ಮೆ. ಟನ್ ರಸಗೊಬ್ಬರ ವಿತರಣೆಯಾಗಿರುತ್ತದೆ. ಒಟ್ಟಾರೆ 19,925 ಮೆ.ಟನ್ ರಸಗೊಬ್ಬರದ ದಾಸ್ತಾನು ಇದೆ.