ಚಾಕು ತೋರಿಸಿ ಕಾರಿನೊಂದಿಗೆ ಪರಾರಿ
ಮೈಸೂರು: ಕಾರು ಬಾಡಿಗೆಗೆ ಕರೆದುಕೊಂಡು ಹೋದ ಇಬ್ಬರು ವ್ಯಕ್ತಿಗಳು ಚಾಲಕನಿಗೆ ಚಾಕು ತೋರಿಸಿ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಲಷ್ಕರ್ ಮೊಹಲ್ಲಾ ಮೊಹಮ್ಮದ್ ಸೇಠ್ ಬ್ಲಾಕ್ ನಿವಾಸಿ ಅನ್ವರ್ ಶರೀಫ್ (62) ಕಾರು ಕಳೆದುಕೊಂಡವರು. ಇವರು ಇಂಡಿಗೋ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದರು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಬಳಿ ಸೋಮವಾರ ರಾತ್ರಿ ಇಬ್ಬರು ವ್ಯಕ್ತಿಗಳು ಬಂದಿದ್ದಾರೆ. 800 ಬಾಡಿಗೆ ಮಾತನಾಡಿ ಹುಣಸೂರಿಗೆ ಹೋಗಲು ಹೇಳಿದ್ದಾರೆ. ಮಾರ್ಗ ಮಧ್ಯೆ ತಮ್ಮ ಇನ್ನಿಬ್ಬರು ಬರುತ್ತಾರೆ ಎಂದು ಹೇಳಿ ಬೋಗಾದಿ ರಸ್ತೆಗೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯೆ ಚಾಕು ತೋರಿಸಿ ಅನ್ವರ್ನನ್ನು ಕಾರಿನಿಂದ ಹೊರ ತಳ್ಳಿ ಆ ಇಬ್ಬರು ವ್ಯಕ್ತಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಕೆ.ಆರ್. ಉಪ ವಿಭಾಗದ ಎಸಿಪಿ ಎ.ಎನ್. ಪ್ರಕಾಶ್ಗೌಡ ತಿಳಿಸಿದ್ದಾರೆ.
ಪರ್ಸ್ ಕಳವು
ಮೈಸೂರು: ನ್ಯಾಯಾಲಯ ಆವರಣದಲ್ಲಿ ವೈದ್ಯರೊಬ್ಬ ಪರ್ಸ್ ಕಳವು ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಶಿವಾರಂಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ. ಗೋವಿಂದ ಎಂಬವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1ನೇ ಹೆಚ್ಚುವರಿ ಪ್ರಥಮ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬರುತ್ತಿದ್ದಾಗ ಅವರ ಪರ್ಸ್ ಕಳವಾಗಿತ್ತು. ಪರ್ಸ್ನಲ್ಲಿ 8 ಸಾವಿರ ಇತ್ತು. ಈ ವಿಚಾರ ತಿಳಿದು ವಕೀಲರು ಹಲವರನ್ನು ಪರಿಶೀಲಿಸಿದರೂ ಪರ್ಸ್ ಮಾತ್ರ ಸಿಗಲಿಲ್ಲ. 1ನೇ ಹೆಚ್ಚುವರಿ ಪ್ರಥಮ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರತಿದಿನ ಹೆಚ್ಚಿನ ಜನ ಬಂದಿರುತ್ತಾರೆ. ಕೆಲವೊಮ್ಮೆ ಕಾಲಿಡಲು ಜಾಗ ಇರುವುದಿಲ್ಲ ಎಂದು ವಕೀಲ ಪಿ.ಜೆ. ರಾಘವೇಂದ್ರ ತಿಳಿಸಿದ್ದಾರೆ. ಈ ಸಂಬಂಧ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಲಕ್ಷ್ಮಿಪುರಂ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಸಾವು
ಮೈಸೂರು: ಬೈಕ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಒಂದೂವರೆ ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಮೈಸೂರು ತಾಲೂಕು ಸಿದ್ದಲಿಂಗಪುರ ನಿವಾಸಿ ಮಹದೇವಮ್ಮ (60) ಮೃತಪಟ್ಟವರು. ಇವರು ಜು.11 ರಂದು ಮೈಸೂರು- ಬೆಂಗಳೂರು ರಸ್ತೆ ದಾಟುತ್ತಿದ್ದಾಗ ಶ್ರೀರಂಗಪಟ್ಟಣ ಕಡೆಯಿಂದ ಬಂದ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ಈ ಸಂಬಂಧ ಎನ್.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ: ವ್ಯಕ್ತಿ ಬಂಧನ
ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲವಾಲ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೈಸೂರು ತಾಲೂಕು ಹುಯಿಲಾಳು ನಿವಾಸಿ ಬಸವೇಗೌಡ ಎಂಬವರ ಪುತ್ರ ರಾಮೇಗೌಡ (55) ಬಂಧಿತ ಆರೋಪಿ. ಪ್ರೊಬೇಷನರ್ ಡಿವೈಎಸ್ಪಿ ಸಿದ್ದೇಶ್ವರ, ಎಸ್ಐ ಪುನೀತ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.