ಮೂಲ ಆದಿವಾಸಿಗಳ ಬೃಹತ್ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 13
ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಮತ್ತು ಸಾಮುದಾಯಿಕ ಹಕ್ಕುಗಳನ್ನು ಶೀಘ್ರವಾಗಿ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ನೇತೃತ್ವದಲ್ಲಿ ಆದಿವಾಸಿಗಳು ಮಂಗಳವಾರ ಪ್ರತಿಭಟಿಸಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ನೂರಾರು ಮಂದಿ ಆದಿವಾಸಿಗಳು, ಆದಿವಾಸಿಗಳು ಅರಣ್ಯ ಹಕ್ಕು ಸಂರಕ್ಷಣೆಗಾಗಿ ಬುಡಕಟ್ಟುಗಳು ವಾಸವಾಗಿರುವ ಪಶ್ಚಿಮಘಟ್ಟ ಪ್ರದೇಶವನ್ನು ಅನುಸೂಚಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಪಶ್ಚಿಮಘಟ್ಟ ಪ್ರದೇಶವನ್ನು ನಕ್ಸಲರಿಂದ ಮುಕ್ತಗೊಳಿಸಿ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಆದಿವಾಸಿಗಳ ಮೇಲೆ ಅರಣ್ಯಾಧಿಕಾರಿಗಳು ಹೂಡಿರುವ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಜೇನು ಕುರುಬ ಮತ್ತು ಕೊರಗ ಆದಿಮ ಬುಡಕಟ್ಟುಗಳ ಕೇಂದ್ರಿತ ಮತ್ತು ಆಡ್ವಿ ಚಿಂಚೇರ್, ಡುಂಗ್ರಿ ಗರಾಸಿಯ, ಕಾತಕರಿ, ರಾಜಗೊಂಡ ಇತರೆ ಅಲೆಮಾರಿ ಮತ್ತು ಅಲಕ್ಷಿತ ಬುಡಕಟ್ಟುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಿ ಲ್ಯಾಂಪ್ಸ್ ಸಹಕಾರ ಸಂಘಗಳ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಬುಡಕಟ್ಟುಗಳ ಪರ್ಯಾಯ ಪದಗಳನ್ನು ಮತ್ತು ಪ್ರಾದೇಶಿಕ ಮಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಬೇಕು. ಶೈಕ್ಷಣಿಕವಾಗಿ ಆದಿವಾಸಿಗಳನ್ನು ಉನ್ನತೀಕರಿಸಲು ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಇಂತಹ ಶಾಲೆಗಳಲ್ಲಿ ಕನಿಷ್ಠ ಶೇ. 50 ಶಿಕ್ಷಕರನ್ನು ಕಾಯಂ ಆಗಿ ಗಿರಿಜನ ಹಿನ್ನೆಲೆಯುಳ್ಳವರನ್ನು ನೇಮಿಸಬೇಕು. ರಾಜ್ಯ ಸರ್ಕಾರವು ಪ್ರತಿ ವರ್ಷ ವಿಶ್ವ ಆದಿವಾಸಿ ದಿನದಂದು ಆದಿವಾಸಿ ಸಾಧಕರನ್ನು ಗುರುತಿಸಿ ಆದಿವಾಸಿ ಸಿರಿ ಎಂಬ ಪ್ರಶಸ್ತಿ ನೀಡಿ ಗೌರವಿಸಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆದಿವಾಸಿ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹೆಸರು ಬದಲಿಸದೆ ಮೂಲ ಬುಡಕಟ್ಟು ಕೇಂದ್ರಿತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡಗಳ ಆಯೋಗ, ಸಚಿವಾಲಯ, ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು. ಬುಡಕಟ್ಟು ಪರ ಅನುಷ್ಠಾನಗೊಳಿಸಿದ ಇದುವರೆಗಿನ ಎಲ್ಲ ಯೋಜನೆಗಳ ಮೌಲ್ಯಮಾಪನ ಆಗಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ಡುಂಗ್ರಿಗರಾಸಿಯ ಆದಿವಾಸಿ ಗಿರಿಜನರಿಗೆ ಕೂಡಲೆ ಹಕ್ಕು ಪತ್ರ ನೀಡಬೇಕು. ಎಲ್ಲಾ ಹಾಡಿ, ಪೋಡು ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಒದಗಿಸಬೇಕು. ಎಚ್.ಡಿ. ಕೋಟೆ ತಾಲೂಕು ಉದ್ಬೂರು ಕಾಲೋನಿ, ಸೀಗುರು ಹಾಡಿಗಳ 65 ಕುಟುಂಬಗಳಿಗೆ ಜಮೀನನ್ನು ಸವರ್ಣಿಯರು ಆಕ್ರಮಿಸಿಕೊಂಡಿದ್ದು, ಇದನ್ನು ತೆರವುಗೊಳಿಸಿ ಆದಿವಾಸಿಗಳ ಸ್ವಾಧೀನಕ್ಕೆ ನೀಡಬೇಕು. ಗಿರಿಜನ ಮೀನು ಸಹಕಾರ ಸಂಘಕ್ಕೆ ಕಬಿನಿ ಜಲಾಶಯದಲ್ಲಿ ಮೀನು ಹಿಡಿಯಲು ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು.
ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕು. ಆದಿವಾಸಿಗಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರವನ್ನು 6 ತಿಂಗಳಿಗೆ ಬದಲಿಗೆ 1 ವರ್ಷಕ್ಕೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಭರವಸೆ: ಆದಿವಾಸಿಗಳ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ. ಶಿಖಾ ಅವರು, ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭವಸೆ ನೀಡಿದರು. ಉಳಿದ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣಯ್ಯ, ಜಿಲ್ಲಾಧ್ಯಕ್ಷ ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಬಿ. ಕಾವೇರ, ಮುಖಂಡರಾದ ಜಿ. ಸ್ವಾಮಿ, ಜಯರಾಜು, ಕುಮಾರ, ರಾಜೇಂದ್ರ, ಇಂದು, ಈರಯ್ಯ, ಮಾಸಮ್ಮ ಇದ್ದರು.