ಸರ್ಕಾರಿ ಕಚೇರಿಗಳಿಗೆ ಅಲೆಸುವುದನ್ನು ತಪ್ಪಿಸಿ
ತಾಂಡವಪುರ: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಧಿಕಾರಿಗಳು ರೈತರನ್ನು ಗೌರವ ಮತ್ತು ಪ್ರೀತಿಯಿಂದ ಕಂಡು ಅವರ ಕೆಲಸ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸಿದಾಗ ಮಾತ್ರ ರೈತರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯ ಎಂದು ನಿವೃತ್ತಿ ಹೊಂದಿದ ರಾಜಸ್ವ ನಿರೀಕ್ಷಕ ಚಿಕ್ಕಹಲಗೇಗೌಡ ಅಭಿಪ್ರಾಯಪಟ್ಟರು.
ಚಿಕ್ಕಯ್ಯನ ಛತ್ರ ಗ್ರಾಮದಲ್ಲಿರುವ ಹೋಬಳಿಯ ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಭಾಗದ ಯಾವುದೇ ರೈತರಿಗೂ ತೊಂದರೆ ನೀಡಿಲ್ಲ. ಸಹಾಯವನ್ನೇ ನೀಡಿ, ಅವರನ್ನು ಪ್ರೀತಿಯಿಂದ ಕಂಡಿದ್ದೇನೆ ಎಂದು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಉಪ ತಹಸೀಲ್ದಾರ್ ರಾಮ್ ಪ್ರಿಯ, ಗ್ರಾಮಲೆಕ್ಕಾಧಿಕಾರಿಗಳಾದ ಕುಟ್ಟಪ್ಪ, ಶೇಖರ್, ವೆಂಕಟೇಶ್, ಯೋಗೇಂದ್ರ ಡಿಸೋಜ ಇದ್ದರು.