ಚೆಕ್ ಬೌನ್ಸ್; ಏಜೆಂಟ್ಗೆ ಶಿಕ್ಷೆ
ಮೈಸೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಎಪಿಎಂಸಿ ಮಾರುಕಟ್ಟೆಯ ಕಮಿಷನ್ ಏಜೆಂಟ್ ಹಾಗೂ ಜನರಲ್ ಮರ್ಚೆಂಟ್ ಎಂ. ನಾಗೇಶ್ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮೈಸೂರಿನ ಎಪಿಎಂಸಿ ಯಾರ್ಡ್ನಲ್ಲಿ ಕಮಿಷನ್ ಏಜೆಂಟ್ ಹಾಗೂ ಜನರಲ್ ಮರ್ಚೆಂಟ್ ಆಗಿರುವ ಎಂ. ನಾಗೇಶ್ ಎಂಬವರು ಚಾಮರಾಜ ಜೋಡಿ ರಸ್ತೆಯಲ್ಲಿರುವ ಮೇ. ಸಂಭ್ರಮ ಚಿಟ್ಸ್ ಪ್ರೈ.ಲಿ. ಸಂಸ್ಥೆಯಲ್ಲಿ 3 ಲಕ್ಷ ಚಿಟ್ ವ್ಯವಹಾರದಲ್ಲಿ ಭಾಗವಹಿಸಿ, ಬಹುಮಾನದ ಮೊತ್ತ ಪಡೆದಿದ್ದರು. ತಾವು ಪಡೆದ ಚಿಟ್ ಮೊತ್ತದ ಬಾಬ್ತು ಮೊತ್ತವಾದ 1,68,000ನ್ನು ನಾಗೇಶ್ ಅವರು ಸಂಭ್ರಮ ಚಿಟ್ಸ್ ಸಂಸ್ಥೆಯಲ್ಲಿ ಬಾಕಿ ಉಳಿಸಿಕೊಂಡಿದ್ದರು. ಈ ಬಾಕಿ ಮೊತ್ತವನ್ನು ಮರುಪಾವತಿ ಮಾಡುವ ಸಲುವಾಗಿ ಸಂಸ್ಥೆಗೆ ಚೆಕ್ ನೀಡಿದ್ದರು. ಸದರಿ ಚೆಕ್ ಅನ್ನು ಸಂಭ್ರಮ ಚಿಟ್ಸ್ ಸಂಸ್ಥೆಯು ತನ್ನ ಖಾತೆಗೆ ಹಾಜರುಪಡಿಸಿದಾಗ ನಾಗೇಶ್ ಅವರ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಕಾರಣದಿಂದ ಆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮೈಸೂರಿನ 1ನೇ ಹೆಚ್ಚುವರಿ ಪ್ರಥಮ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ ನ್ಯಾಯಾಲಯದಲ್ಲಿ ಸಂಭ್ರಮ ಚಿಟ್ಸ್ ಸಂಸ್ಥೆಯು ಖಾಸಗಿ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಎಸ್.ಆಳ್ವ ಅವರು ಆರೋಪಿಯ ವಿರುದ್ಧ ಆಪಾದನೆ ಸಾಬೀತಾದ ಕಾರಣ ನಾಗೇಶ್ಗೆ 2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದರು. ಈ ದಂಡವನ್ನು ಪಾವತಿಸಲು ಆರೋಪಿ ವಿಫಲನಾದರೆ 6 ತಿಂಗಳ ಕಾಲ ಸಾದಾ ಸೆರೆವಾಸ ಅನುಭವಿಸಬೇಕು. ಈ 2 ಲಕ್ಷದಲ್ಲಿ 1.95 ಲಕ್ಷ ಸಂಭ್ರಮ ಚಿಟ್ಸ್ ಪ್ರೈ ಲಿ.ಗೂ ಹಾಗೂ ಉಳಿದ 5 ಸಾವಿರ ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ. ಸಂಭ್ರಮ ಚಿಟ್ಸ್ ಪ್ರೈ.ಲಿ. ಸಂಸ್ಥೆಯ ಪರ ವಕೀಲ ಪಿ.ಜೆ.ರಾಘವೇಂದ್ರ ವಕಾಲತ್ತು ವಹಿಸಿದ್ದರು.
ಸೆ. 1ರಿಂದ ರಂಗ ತರಬೇತಿ ಶಿಬಿರ
ನಿರಂತರ ಫೌಂಡೇಷನ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಹಜರಂಗ- 2013 ರಂಗ ತರಬೇತಿ ಶಿಬಿರವನ್ನು ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಸೆ. 1ರಿಂದ ಅ. 2ರವರೆಗೆ ಏರ್ಪಡಿಸಿದೆ. ಆಸಕ್ತರು ಮೊ. 9980273167 ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಅಧ್ಯಕ್ಷೆ ಎಂ.ಎಂ. ಸುಗುಣ ತಿಳಿಸಿದ್ದಾರೆ.
ರಾಷ್ಟ್ರಪತಿ ಪದಕ
ಬೆಂಗಳೂರು: ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆಗಾಗಿ ನೀಡುವ ರಾಷ್ಟ್ರಪತಿ ಪದಕವನ್ನು ಮೈಸೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಬಸವಣ್ಣ ಸಿ. ಅವರಿಗೆ ಲಭಿಸಿದೆ.