ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮರಳುಗಾರಿಕೆಯಿಂದಲೇ ಅಣೆಕಟ್ಟೆ ಕುಸಿತ

Rashmi Kasaragodu
Updated On : 15 Aug 2013, 12:33 pm

ಕ.ಪ್ರ.ವಾರ್ತೆ  ಮೈಸೂರು  ಆ. 14
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಕ್ರಮ ಗಣಿಗಾರಿಕೆಗೆ ಕಡಿವಾಣ ಇತ್ತು. ಆದರೀಗ ಸರ್ಕಾರದ ಮಂತ್ರಿಗಳ ಮಕ್ಕಳ ಗಣಿಗಾರಿಕೆಯಿಂದಾಗಿ ಮಾಧವಮಂತ್ರಿ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಬಿಜೆಪಿ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ,ಪುರಾತನ ಮಾಧವಮಂತ್ರಿ ಅಣೆಕಟ್ಟೆ ಕುಸಿದು 40 ಸಾವಿರ ರೈತ ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಸಮೀಪ ಕ್ಷೇತ್ರದ ಶಾಸಕರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿಲ್ಲ. ಅಲ್ಲಿನ ಮರಳು ಗಣಿಗಾರಿಕೆಗೆ ಬಿಜೆಪಿ ಸರ್ಕಾರ ಕಡಿವಾಣ ಹಾಕಿತ್ತು. ಆದರೆ, ಈಗ ಮಂತ್ರಿಗಳ ಮಕ್ಕಳು ಮತ್ತು ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಕ್ಕಳು ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರ ಫಲವಾಗಿ ಮಾಧವ ಮಂತ್ರಿ ಅಣೆಕಟ್ಟೆ ಕುಸಿದು ಬಿದ್ದಿದೆ ಎಂದರು.
ಎಂಎಲ್‌ಎ, ಎಂಎಲ್‌ಸಿ, ಎಂಪಿಗಳು ಸದನಕ್ಕೆ ಹೋಗದಿದ್ದರೆ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲ. ಆದರೆ, ಬಡವರು ಮತ್ತು ಮುಗ್ಧರಾದ ಗ್ರಾಪಂ ಸದಸ್ಯರ ಮೇಲೆ ಕ್ರಮ ಸಲ್ಲದು.
ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರ ನಿರ್ಮಾಣ ಆಗಬೇಕು. ಅದಕ್ಕಾಗಿ ಬೇರೆ ಬೇರೆಯಾಗಿದ್ದ ಕೆಜೆಪಿ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಒಂದಾಗಿದ್ದೇವೆ. ಈ ಕಾರಣಕ್ಕೆ ಈ ಚುನಾವಣೆ ಮಹತ್ವವಾಗಲಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಇದ್ದಾಗ ಮಾತ್ರ ಸಮನ್ವಯ ಸಮಿತಿ ರಚಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಒಂದೆ ಪಕ್ಷ ಬಹುಮತ ಗಳಿಸಿದ್ದರೂ ಸಮನ್ವಯ ಸಮಿತಿ ರಚಿಸಿರುವುದು ಅಪಚಾರ. ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷದ ಬಳಿ ಕೆಲವು ಗೊಂದಲ ಉಂಟಾಯಿತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೆ ತಿಂಗಳಲ್ಲಿ ಜಗಳ ಆರಂಭವಾಗಿದೆ. ಕಾಂಗ್ರೆಸ್ ಈಗ ನಾಲ್ಕು ಗುಂಪಾಗಿದೆ ಎಂದು ಟೀಕಿಸಿದರು.
ಮೈಸೂರಿನ ಸ್ಥಳೀಯ ಸಂಸ್ಥೆಗಳ ಬಿಜೆಪಿ ಪ್ರತಿನಿಧಿಗಳು ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಅವರಿಗೆ ತಮ್ಮ ಬೆಂಬಲ ನೀಡಬೇಕು. ಆ ಮೂಲಕ ಕಾಂಗ್ರೆಸ್ ನಿರಾಕರಿಸಿ, ಸಿದ್ದರಾಮಯ್ಯ ಅವರಿಗೆ ಬುದ್ಧಿ ಕಲಿಸಬೇಕು ಎಂದು ಅವರು ಕರೆ ನೀಡಿದರು.
ಸ್ವಾಗತ: ಬಿಜೆಪಿಯ ಕಾರ್ಯಕ್ರಮಕ್ಕೆ ಮತಯಾಚಿಸಲು ಆಗಮಿಸಿದ ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಅವರನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆತ್ಮೀಯವಾಗಿ ಸ್ವಾಗತಿಸಿದರು.
ಬಿಜೆಪಿಯ ಚಿಹ್ನೆ ಇರುವ ಶಾಲು ಹೊದಿಸಿ ಗೌರವಿಸಿದರು. ತಮ್ಮ ಭಾಷಣದಲ್ಲಿ ಮುಂದೆ ಅವರೂ ಬಿಜೆಪಿ ಸದಸ್ಯರಾಗಬಹುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಸಿ.ಎಚ್. ವಿಜಯಶಂಕರ್, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್, ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿದರು. ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ರಮೇಶ್, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ನಗರ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಯಶಸ್ವಿ ಸೋಮಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ಡಾ. ಶಿವರಾಂ, ಕೆಜೆಪಿ ಮುಖಂಡ ಎಚ್.ವಿ. ರಾಜೀವ್, ಪಾಲಿಕೆ ಸದಸ್ಯರಾದ ಮ.ವಿ. ರಾಮ್‌ಪ್ರಸಾದ್, ಮಹದೇವಮ್ಮ, ವನಿತಾ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement