ವಿದೇಶದಲ್ಲೂ ಆಯುರ್ವೇದಕ್ಕೆ ಮನ್ನಣೆ
ಕ.ಪ್ರ.ವಾರ್ತೆ ಮೈಸೂರು ಆ. 14
ಭಾರತೀಯ ಮೂಲದ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ವಿದೇಶಗಳಲ್ಲಿ ಹೆಚ್ಚು ಮನ್ನಣೆ ಪಡೆಯುತ್ತಿದೆ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜಿ ಹೇಳಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಿದ್ದ ದಂತಾರೋಗ್ಯ ಅಭಿಯಾನ, ಕ್ಯಾನ್ಸರ್ ತಪಾಸಣೆ ಮತ್ತು ನಿರ್ವಹಣೆ ವಿಭಾಗ ಉದ್ಘಾಟಿಸಿ ಮಾತನಾಡಿ, ಜನರು ಅಲೋಪತಿ ಬಳಸುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಆಯುರ್ವೇದದ ಪ್ರಸಿದ್ಧಿ ಪಡೆಯುತ್ತಿದೆ. ಆದ್ದರಿಂದಲೇ ವಿದೇಶದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ ಎಂದರು.
ಕೇವಲ ಅಲೋಪತಿ ಚಿಕಿತ್ಸೆಯಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎಂದು ಎಲ್ಲರೂ ನಂಬುತ್ತಾರೆ. ಆದರೆ, ಆಯುರ್ವೇದದಿಂದಲೂ ಕ್ಯಾನ್ಸರ್ ವಾಸಿ ಮಾಡಬಹುದು. ಈ ನೆಲದಲ್ಲಿ ಸಿಗುವ ಗಿಡಮೂಲಿಕೆಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇಂತಹ ಜ್ಞಾನವನ್ನು ನಮ್ಮ ಪೂರ್ವಿಕರು ಹಿಂದೆಯೇ ಗಳಿಸಿಕೊಂಡಿದ್ದರು. ಹಾಗಾಗಿ ಆಯುರ್ವೇದವನ್ನು ಪುನರ್ ಬಳಸುವ ಮೂಲಕ ಗುಣಾತ್ಮಕ ನಿಯಂತ್ರಣ ಹೇರಿಕೊಳ್ಳಬೇಕು ಎಂದು ತಿಳಿಸಿದರು.
ದಂತವೈದ್ಯ ಡಾ.ಜೆ. ವಿವೇಕ್ ಮಾತನಾಡಿ, ಹಲ್ಲು ಕೀಳಲು ಅಲೋಪತಿ ಪದ್ಧತಿ ಬಳಸುವುದು ಎಲ್ಲರಿಗೂ ಗೊತ್ತು. ಇದಕ್ಕಿಂತಲೂ ಹಿಂದಿನದ್ದಾದ ಆಯುರ್ವೇದ ಪದ್ಧತಿಯಿಂದಲೂ ನೋವಿಲ್ಲದೆ ಹಲ್ಲು ಕೀಳುವ, ದಂತಕ್ಷಯ ವಾಸಿ ಮಾಡುವ ಪದ್ಧತಿ ಎಷ್ಟೋ ಜನರಿಗೆ ಗೊತ್ತಿಲ್ಲ. ನಮ್ಮಲ್ಲಿ ಆಯುರ್ವೇದ ಎಂದರೆ ಒಂದು ರೀತಿಯಲ್ಲಿ ತಾತ್ಸಾರ ಮನೋಭಾವ ಇದೆ. ಇಂಜೆಕ್ಷನ್, ಅರವಳಿಕೆ ಇಲ್ಲದೆ ಹಲ್ಲು ಕೀಳುವ ವಿಧಾನ ಆಯುರ್ವೇದದಲ್ಲಿದೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು.