ಇಳಿ ಹೊತ್ತಲ್ಲಿ ಗೀತ ಗಾಯನದ ಮಳೆ!
ಕ.ಪ್ರ.ವಾರ್ತೆ ಮೈಸೂರು ಆ. 15
ಕುವೆಂಪು ನಗರದ ಅನಿಕೇತನ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಯಕಿ ಅರ್ಚನಾ ಉಡುಪ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಇಳಿ ಸಂಜೆಯ ತಂಪಿನ ನಡುವೆ, ಅರ್ಚನ ಉಡುಪ ಅವರ ಭಾವಗೀತೆಗಳ ಮಳೆಯು ಸಂಗೀತ ರಸಿಕರ ಮನ ತಣಿಸಿತು. ಸುಮಾರು 2 ಗಂಟೆಗಳ ಕಾಲ ಉಡುಪ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ಗಾಯಕಿ ಎಚ್.ಆರ್. ಲೀಲಾವತಿ, ಪತ್ರಕರ್ತ ರವೀಂದ್ರ ಭಟ್ಟ, ಹಿರಿಯ ವೈದ್ಯ ಡಾ. ಎಸ್. ರಂಗನಾಥಯ್ಯ, ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಕೆ.ಎಂ. ಚಂದ್ರೇಗೌಡ, ಕಿರಿಯ ಪ್ರತಿಭೆಗಳಾದ ಸಹನ್ ಆಳ್ವ ಮತ್ತು ವಿ. ನಿತಿನ್ ಅವರನ್ನು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸನ್ಮಾನಿಸಿದರು. ನಿತಿನ್ ಬದಲಿಗೆ ಅವರ ತಾಯಿ ಪ್ರಶಸ್ತಿ ಸ್ವೀಕರಿಸಿದರು.
ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವದಿಸಿದರು. ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಾ.ರಾ. ಮಹೇಶ್, ಮರಿತಿಬ್ಬೇಗೌಡ, ಜಿ.ಟಿ. ದೇವೇಗೌಡ, ಕೆ.ವಿ. ನಾರಾಯಣಸ್ವಾಮಿ, ವಾಸು, ಸೆಸ್ಕ್ ಎಂಡಿ ಎ.ಬಿ. ಇಬ್ರಾಹಿಂ, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಟ್ರಸ್ಟ್ನ ಅಧ್ಯಕ್ಷ ಮತ್ತು ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್, ಕಾರ್ಯದರ್ಶಿ ಕಿರಣ್ಕುಮಾರ್ ಇದ್ದರು.