ಚಾಮುಂಡಿ ವಿಹಾರ ಬದಲು ಓವಲ್ ಮೈದಾನ
ಮೈಸೂರು: ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಆದರೆ ಕ್ರೀಡಾಂಗಣ ದುರಸ್ತಿಯಲ್ಲಿರುವುದರಿಂದ ಇದೇ ಮೊದಲ ಬಾರಿಗೆ ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರಿನ ಓವಲ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಚಾಮುಂಡಿ ವಿಹಾರ ಕ್ರೀಡಾಂಗಣ ನಿರ್ಮಾಣಕ್ಕೂ ಮೊದಲು ಅರಮನೆ ಆವರಣದಲ್ಲಿಯೇ ರಾಷ್ಟ್ರೀಯ ಹಬ್ಬ ಕಾರ್ಯಕ್ರಮಗಳು ಜರುಗುತ್ತಿದ್ದವು.
ನಾಪತ್ತೆಯಾಗಿದ್ದ ವರ ಶವವಾಗಿ ಪತ್ತೆ
ಮೈಸೂರು: ಲಗ್ನಪತ್ರಿಕೆ ಹಂಚಲು ಹೋಗಿ ನಾಪತ್ತೆಯಾಗಿದ್ದ ವರ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ತಾಲೂಕಿನ ದಂಡಿಕೆರೆ ಬಳಿ ಗುರುವಾರ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹೆಡತಲೆ ನಿವಾಸಿ ನಟರಾಜ್ (35) ಮೃತಪಟ್ಟವರು. ಇವರು ಎಚ್.ಡಿ. ಕೋಟೆ ತಾಲೂಕು ಅಸ್ವಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರ ವಿವಾಹವು ಹಾಸನದ ಯುವತಿಯೊಂದಿಗೆ ಆ.18 ಮತ್ತು 19 ರಂದು ನಿಗದಿಯಾಗಿತ್ತು. ಲಗ್ನ ಪತ್ರಿಕೆ ಹಂಚುವ ಸಲುವಾಗಿ ನಟರಾಜ್ ಮಂಗಳವಾರ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ನಟರಾಜ್ ತೆಗೆದುಕೊಂಡು ಹೋಗಿದ್ದ ಲಗ್ನಪತ್ರಿಕೆಯ ಬ್ಯಾಗ್ ಕೆಆರ್ಎಸ್ ರಸ್ತೆಯಲ್ಲಿರುವ ವರುಣ ನಾಲೆ ಬಳಿ ಬುಧವಾರ ಪತ್ತೆಯಾಗಿತ್ತು. ಅವರ ಮೃತದೇಹವು ದಂಡಿಕೆರೆ ಬಳಿ ಗುರುವಾರ ಪತ್ತೆಯಾಗಿದೆ. ಮೈಸೂರು ದಕ್ಷಿಣ ಠಾಣೆ ಎಸ್ಐ ವೆಂಕಟೇಶಯ್ಯ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಂಪರ್ಕ ತರಗತಿ
ಮೈಸೂರು: ಎಂ.ಫಿಲ್ ಪದವಿ ಕೋರ್ಸಿನ ಸಂಪರ್ಕ ತರಗತಿಯು ಆ. 17ರ ಮಧ್ಯಾಹ್ನ 3.30ಕ್ಕೆ ಮಹಾಜನ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ ಡಾ. ಸಿಪಿಕೆ ತರಗತಿ ಉದ್ಘಾಟಿಸುವರು. ಕುವೆಂಪು ವಿದ್ಯಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಎನ್. ರಾಮಸ್ವಾಮಿ ಅಧ್ಯಕ್ಷತೆ ವಹಿಸುವರು.
ಬಾಲಕ ನಾಪತ್ತೆ
ಮೈಸೂರು: ರಾಮಕೃಷ್ಣನಗರ ಇ ಆ್ಯಂಡ್ ಎಫ್ ಬ್ಲಾಕ್ ನಿವಾಸಿ ಸಿ. ಸೋಮಶೇಖರ ಎಂಬವರ ಪುತ್ರ ಹಾಗೂ 9ನೇ ತರಗತಿ ವಿದ್ಯಾರ್ಥಿ ಎಸ್. ಮನೋಜ್ (14) ಮಂಗಳವಾರ ಮಾತ್ರೆ ತರಲು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 4 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಶರೀರ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418324 ಸಂಪರ್ಕಿಸಲು ಕುವೆಂಪುನಗರ ಠಾಣೆ ಪೊಲೀಸರು ಕೋರಿದ್ದಾರೆ.