ರಾಷ್ಟ್ರೀಯತೆಗಿಂತ ಹೆಚ್ಚಿದ ಸ್ವಾರ್ಥ: ಪ್ರೊ. ಪಿವಿಎನ್ ವಿಷಾದ
ಮೈಸೂರು: ಇಂದು ಜನರಲ್ಲಿ ಸ್ವದೇಶಿಯತೆ ಹಾಗೂ ರಾಷ್ಟ್ರೀಯತೆಗಿಂತ ಸ್ವಾರ್ಥ ಮುಖ್ಯವಾಗಿದೆ ಎಂದು ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್ ವಿಷಾದಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 67ನೇ ಸ್ವಾಂತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳುಹಿಸಬೇಕೆಂದು ಬಯಸುವುದನ್ನು ಕಾಣಬಹುದು. ಅವರಿಗೆ ಸ್ವದೇಶದ ಪ್ರೇಮ ಹಾಗೂ ರಾಷ್ಟ್ರೀಯತೆ ಭಕ್ತಿಗಿಂತ ಹಣ ಮುಖ್ಯವಾಗಿದೆ. ಅಧಿಕ ಹಣ ಗಳಿಸುವ ಆಸೆಗಾಗಿ ವಿದೇಶಕ್ಕೆ ಹೋಗುವುದಿದೆ. ಹಣ ಗಳಿಸುವ ಸಲುವಾಗಿ ಆರೋಗ್ಯ ಕಳೆದುಕೊಳ್ಳುವ ಕೆಲಸ ನಡೆದಿದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರು ಸ್ವಾವಲಂಬನೆ ಹಾಗೂ ಸ್ವಉದ್ಯೋಗಕ್ಕಾಗಿ ಒತ್ತು ನೀಡಿದ್ದರು. ಅದಕ್ಕಾಗಿ ಅವರು ಯಾವಾಗಲೂ ಚರಕವನ್ನು ಸಾಂಕೇತಿಕವಾಗಿ ಬಳಸುತ್ತಿದ್ದರು. ಆದರೆ ಇಂದು ಉದಾರೀಕರಣ ಹಾಗೂ ಜಾಗತೀಕರಣ ಹಿನ್ನೆಲೆಯಲ್ಲಿ ಎಲ್ಲಾದಕ್ಕೂ ಬಹುರಾಷ್ಟ್ರಿಯ ಕಂಪನಿಗಳನ್ನು ಅವಲಂಬಿಸುವಂತಾಗಿದೆ. ಇದು ದೇಶದ ಹಿತಕ್ಕೆ ಎಷ್ಟು ಉಪಕಾರಿ ಎಂಬುದನ್ನು ಚಿಂತಿಸಬೇಕು ಎಂದು ತಿಳಿಸಿದರು.
ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಧ್ವಜಾರೋಹಣ ನೆರವೇರಿಸಿದರು. ಪ್ರಭಾರ ಕುಲಸಚಿವ ಪ್ರೊ. ವಿಕ್ರಂರಾಜೇ ಅರಸ್ ಸ್ವಾಗತಿಸಿದರು. ಡಾ. ಎಂ. ಮಂಜುನಾಥ್ ನಿರೂಪಿಸಿದರು. ವಿವಿಯ ಹಣಕಾಸು ಅಧಿಕಾರಿ ಪ್ರೊ. ರಾಜಶೇಖರಯ್ಯ, ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಟಿ.ಡಿ. ದೇವೇಗೌಡ, ಜೈನಹಳ್ಳಿ ಸತ್ಯನಾರಾಯಗೌಡ ಇತರರು ಇದ್ದರು.