ವಂದೇ ಮಾತರಂ.. ಭಾರತ್ ಮಾತಾಕಿ ಜೈ...
ವಾಣಿಜ್ಯ ತೆರಿಗೆ ನೌಕರರ ಸಂಘ
ಕ.ಪ್ರ.ವಾರ್ತೆ ಮೈಸೂರು ಆ. 15
ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಸಿ ಮತ್ತು ಡಿ ವರ್ಗಗಳ ನೌಕರರ ಸಂಘವು ಇಲ್ಲಿನ ದಿವಾನ್ಸ್ ರಸ್ತೆಯಲ್ಲಿರುವ ಶೇಷಾದ್ರಿ ಭವನದ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಡಳಿತ ವಿಭಾಗದ ಜಂಟಿ ಆಯಕ್ತ ನಾಗರಾಜಪ್ಪ ಹಾಗೂ ಮನವಿಗಳ ವಿಭಾಗದ ಜಂಟಿ ಆಯುಕ್ತ ಕೆ.ವಿ. ಸತ್ಯಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ಜಯಸಿಂಹ ಹಾಗೂ ರಾಮಶೇಷ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ತೆರಿಗೆ ಅಧಿಕಾರಿ ಮುರಳೀಧರ್, ಸಂಘದ ಅಧ್ಯಕ್ಷ ಡಿ. ಹರೀಶ್ಬಾಬು, ಉಪಾಧ್ಯಕ್ಷ ಬಿ.ಜೆ. ರವಿಕುಮಾರ್, ಕಾರ್ಯದರ್ಶಿ ಡಿ.ಎಂ. ಬಸವರಾಜು ಇದ್ದರು.
ಸುಮುಖ ಪಿಯು ಕಾಲೇಜು
ಸುಮುಖ ಸ್ವತಂತ್ರ ಪದವಿಪೂರ್ವ ಕಾಲೇಜು ವತಿಯಿಂದ ಇಲ್ಲಿನ ಹೆಬ್ಬಾಳು ಬಡಾವಣೆಯಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರೊ. ಎಂ.ಎನ್. ಹೇಮಚಂದ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾವು ದೇಶ ಸೇವೆಗಾಗಿ ಏನು ಕೊಡುಗೆ ನೀಡುತ್ತಿದ್ದೇವೆ ಎಂಬ ಅರಿವು ಇರಬೇಕು. ಕೇವಲ ಧ್ವಜಾರೋಹಣ ಮಾಡಿದರೆ ಸಾಲದು. ನಮ್ಮ ನೆರೆಹೊರೆಯ ವಾತಾವರಣ ಶುದ್ಧಿಗೊಳಿಸುವ ಹಾಗೂ ಪರಸ್ಪರ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆ ಯ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ಎಸ್. ಚಂದ್ರಶೇಖರ್, ಪ್ರಾಂಶುಪಾಲ ಬಿ.ಎಚ್. ಗೋವಿಂದಪ್ಪ, ಮುಖ್ಯೋಪಾಧ್ಯಾಯ ಜಿ.ಆರ್. ಗುರುನಾಥ್ ಇದ್ದರು.
ಹರಿ ವಿದ್ಯಾಲಯ
ಬೋಗಾದಿಯಲ್ಲಿರುವ ಹರಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಎಸ್.ವಿ. ಗುರುಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮೈಸೂರು ರಾಮಸ್ವಾಮಿ ಎಂಬ ವಿದ್ಯಾರ್ಥಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಸಿದ ಅವರು, ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು. ಸಂಸ್ಥೆ ಕಾರ್ಯದರ್ಶಿ ಎಚ್.ಆರ್. ಭಗವಾನ್, ನಿರ್ದೇಶಕರಾದ ಪ್ರೊ. ಕೆ.ವಿ. ಸತ್ಯನ್, ಪ್ರಾಂಶುಪಾಲ ಎನ್. ಶ್ರೀವತ್ಸ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಎನ್. ಶ್ರೀಧರ್ ಇದ್ದರು. ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು.
ಮೈಸೂರು ಕನ್ನಡ ವೇದಿಕೆ
ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಹುತಾತ್ಮ ರಾಮಸ್ವಾಮಿಯನ್ನು ಸ್ಮರಿಸುವಲ್ಲಿ ಉದಾಸೀನತೆ ಹೊಂದಿದ್ದಾರೆ ಎಂದು ಆರೋಪಿಸಿದರು. ಮುಖಂಡರಾದ ನಾಲಾಬೀದಿ ರವಿ, ಡೈರಿ ವೆಂಕಟೇಶ್, ಅಜಯ್ಶಾಸ್ತ್ರಿ, ಪ್ಯಾಲೆಸ್ ಬಾಬು, ದೀಪಕ್ ಶೆಟ್ಟಿ, ಗುರು, ಏರ್ಟೆಲ್ ಮಂಜು, ಏಳನೀರು ಕುಮಾರ್, ಗೋಪಿ, ಬೇಕರಿ ಶ್ರೀನಿವಾಸ್ ಹಾಗೂ ಇಲ್ಲಿನ ಅಟೋ ಚಾಲಕರ ಸಂಘದ ಸದಸ್ಯರು ಇದ್ದರು.
ಕನ್ನಡ ಕ್ರಿಯಾ ಸಮಿತಿ
ಇಟ್ಟಿಗೆಗೂಡು ಕನ್ನಡ ಸಮಿತಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಸೈನಿಕರಾದ ಎಸ್.ಎಂ. ಮಾದಪ್ಪ, ಎನ್.ಪಿ. ಅಶ್ರಮ್ ಹಾಗೂ ವೈ.ಕೆ.ಕೆ. ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎನ್. ನೀಲಕಂಠ ಧ್ವಜಾರೋಹಣ ನೆರವೇರಿಸಿದರು. ಎಂ. ಸತ್ಯನಾರಾಯಣ, ಲೆಕ್ಕ ಪರಿಶೋಧಕ ಅಚ್ಯುತ, ಪ್ರಸನ್ನ, ಸಿದ್ದಲಿಂಗಪ್ಪ ಇದ್ದರು.
ಭಾರತ್ ಆಸ್ಪತ್ರೆ
ಹೆಬ್ಬಾಳಿನ ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಮೈಸೂರು ವಿಭಾಗದ ಪ್ರಾಂತೀಯ ಸಲಹೆಗಾರ ಡಾ.ಎನ್. ರಮೇಶ್ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್. ವಿಶ್ವೇಶ್ವರ ಇದ್ದರು.
ಆರ್ಯ ಈಡಿಗರ ಸಂಘ
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಘದ ಹಿರಿಯ ಮುಖಂಡ ಎಂ.ಜಿ. ಪುರುಷೋತ್ತಮ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ. ವಿದ್ಯಾಸಾಗರ ಕದಂಬ ಅಧ್ಯಕ್ಷತೆ ವಹಿಸಿದ್ದರು.
ಹಲಗಯ್ಯನಹುಂಡಿ ಶಾಲೆ
ಮೈಸೂರು ತಾಲೂಕಿನ ಹಲಗಯ್ಯನ ಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಸೈನಿಕ ಜಿ.ಟಿ. ಸೋಮಶೇಖರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ಸಿಲ್ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಜೆಎಸ್ಎಸ್ ಮಹಿಳಾ ಕಾಲೇಜು
ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾಲೇಜಿನ ಪ್ರಾಧ್ಯಾಪಕ ಶಿವಾನಂದ ಭಾರತಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರಾಂತೀಯ ಭಾವನೆ ಮರೆತು ದೇಶದ ಐಕತ್ಯೆಗಾಗಿ ಶ್ರಮಿಸಬೇಕಾಗಿದೆ ಎಂದರು. ಪದವಿ ಕಾಲೇಜು ಪ್ರಾಂಶುಪಾಲ ಎನ್.ಪಿ. ಪದಕಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಎಂ.ಪಿ. ರಾಜೇಶ್ವರಿ, ಶೈಕ್ಷಣಿಕ ಮುಖ್ಯಸ್ಥರಾದ ಡಾ.ಎಚ್.ಸಿ. ಹೊನ್ಪಪ್ಪ ಹಾಗೂ ಜಿ.ಸಿ. ರಾಜಣ್ಣ ಇದ್ದರು.
ಸರ್ವಜನಾಂಗ ಹಿತರಕ್ಷಣಾ ವೇದಿಕೆ
ಸರ್ವಜನಾಂಗ ಹಿತರಕ್ಷಣಾ ವೇದಿಕೆಯು ನಜರಬಾದಿನ ಕಚೇರಿಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸುಬ್ಬಪ್ಪ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ಶಾಂತಿ ಹಾಗೂ ಕ್ರಾಂತಿಯಿಂದ ದೊರೆತ ಸ್ವಾತಂತ್ರ್ಯದಲ್ಲಿ ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ. ಪ್ರಸ್ತುತ ಅಸಮಾನತೆ, ಜಾತೀಯತೆ ಹಾಗೂ ಮೌಢ್ಯಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತ ಪಡಿಸಿದರು. ಎನ್, ಮಹದೇವಪ್ಪ, ಪ್ರೊ. ಗಂಗಾಧರಮೂರ್ತಿ, ಕೆ. ವಜ್ರೇಗೌಡ, ಅಬ್ದುಲ್ ಗಫಾರ್, ಸಲೀನಾ ಮೇರಿ, ಆರ್. ಲಕ್ಷ್ಮಣ್ ರಾಜ್, ಎಂ, ಪ್ರಭುದೇವ್, ಮಹಮ್ಮದ್ ಅನ್ಸಾರಿ, ಪುಟ್ಟಯ್ಯ, ಜಯರಾಜ್, ಹೊನ್ನಪ್ಪಚಾರ್ ಇದ್ದರು.