ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಾತಂತ್ರ್ಯ ಉಳಿಸಿ, ಬೆಳೆಸಿ: ಪ್ರೊ. ಸಿ.ಜಿ. ವೆಂಕಟರಮಣಶೆಟ್ಟಿ

Rashmi Kasaragodu
Updated On : 16 Aug 2013, 12:45 pm

ಕ.ಪ್ರ.ವಾರ್ತೆ   ಮೈಸೂರು   ಆ. 15
ಸುಮಾರು 6 ಲಕ್ಷ ಮಂದಿ ದೇಶಭಕ್ತರು ತ್ಯಾಗ, ಬಲಿದಾನದಿಂದ ದೊರಕಿಸಿಕೊಟ್ಟಿರುವ ಸ್ವಾತಂತ್ರ್ಯ ಉಳಿಸಿ, ಬೆಳೆಸಬೇಕು ಎಂದು ಶಿಕ್ಷಣ ತಜ್ಞ ಪ್ರೊ. ಸಿ.ಜಿ. ವೆಂಕಟರಮಣಶೆಟ್ಟಿ ಕರೆ ನೀಡಿದರು.
ವಾಸವಿ ವಿದ್ಯಾನಿಕೇತನ, ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಕುವೆಂಪು ನಗರದ ಸೌಗಂಧಿಕ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸ್ವಾತಂತ್ರ್ಯ ಹೋರಾಟ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆಯಿತು. ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಸೇನೆಯನ್ನೇ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು ಎಂದು ಸ್ಮರಿಸಿದರು.
ಸ್ವಾತಂತ್ರ್ಯ ಹೋರಾಟ ಕಾಲಕ್ಕೆ ಯಾವುದೇ ಜಾತಿ, ಧರ್ಮ ಕಂಡು ಬರಲಿಲ್ಲ. ದೇಶಭಕ್ತರೆಲ್ಲಾ ಐಕ್ಯತೆಯಿಂದ ಹೋರಾಟ ನಡೆಸಿದರು.  ಆದರೆ ಇವತ್ತೂ ಎಲ್ಲೆಲ್ಲೂ ಜಾತಿಯತೆ ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
ಹಬ್ಬ, ಹರಿದಿನಗಳನ್ನು ಆಯಾ ಜಾತಿ, ಧರ್ಮಕ್ಕೆ ಸೀಮಿತವಾಗಿ ಆಚರಿಸುತ್ತೇವೆ. ಆದರೆ ರಾಷ್ಟ್ರೀಯ ಹಬ್ಬಗಳು ಯಾವುದೇ ಜಾತಿ, ಪಂಗಡಕ್ಕೆ ಸೀಮಿತವಾದುದಲ್ಲ. ಹೀಗಾಗಿ ಎಲ್ಲರೂ ಸೇರಿ ಆಚರಿಸುತ್ತೇವೆ. ಹಿಂದೆ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಎಂದರೆ ಎಲ್ಲ ವರ್ಗದ ಜನರು ಸ್ವಯಂಪ್ರೇರಿತವಾಗಿ ಬಂದು ಭಾಗವಹಿಸಿ, ದೇಶಭಕ್ತರಿಗೆ ಗೌರವ ಸಲ್ಲಿಸುತ್ತಿದ್ದರು. ಇದು ಕ್ರಮೇಣ ಕಡಿಮೆಯಾಗಿದೆ. ಆದರೆ ನಾಳಿನ ಪ್ರಜೆಗಳಾದ ಮಕ್ಕಳು ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸುವ, ಗೌರವ ಸಲ್ಲಿಸುವ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆಶಯದಂತೆ ಮಕ್ಕಳು ದೇಶದ ಭವಿಷ್ಯದ ಪ್ರಜೆಗಳಾಗಿ ರೂಪುಗೊಂಡು, ಗುರಿ ಇಟ್ಟುಕೊಂಡು ಸಾಧನೆ ಮಾಡಿ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ನಮ್ಮತನ ಉಳಿಸಿಕೊಳ್ಳಬೇಕು ಎಂದರು.
ವಾಸವಿ ವಿದ್ಯಾನಿಕೇತನ ಅಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಗುಪ್ತ, ರಾಮಚಂದ್ರ, ರಮೇಶ್, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಗಂಗಾಧರಗೌಡ ಇದ್ದರು.  ಮುಖ್ಯ ಶಿಕ್ಷಕಿ ನಿರ್ಮಲಾ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷರೂ ಆದ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ವಂದಿಸಿದರು.
ಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ಮಾತ್ರವಲ್ಲದೇ ವರ್ಣರಂಜಿತ ಧ್ವಜಗೀತೆ ಕವಾಯತು, ಬ್ಯಾಂಡ್ಸೆಟ್ ಕವಾಯತು, ಸಮೂಹ ಗಾಯನ ನೃತ್ಯ ನಡೆಸಿಕೊಟ್ಟರು. ತಲಾ ಓರ್ವ ವಿದ್ಯಾರ್ಥಿನಿಯರು ಇಂಗ್ಲಿಷ್, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸ್ವಾತಂತ್ರ್ಯ ದಿನದ ಮಹತ್ವ, ರಾಷ್ಟ್ರಧ್ವಜ, ಚಂದ್ರಶೇಖರ್ ಅಜಾದ್ ಕುರಿತು ಭಾಷಣ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement