ಸ್ವಾತಂತ್ರ್ಯ ಸೇನಾನಿಗಳ ಸ್ಮರಿಸಿ
ಟಿ. ನರಸೀಪುರ: ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸೇನಾನಿಗಳನ್ನು ಸ್ಮರಣೆ ಮಾಡುವ ಸಾಮಾಜಿಕ ಪ್ರಜ್ಞೆ ಮೈಗೂಡಿಸಿಕೊಂಡು ಭವ್ಯ ಭಾರತದ ಪ್ರಜೆಗಳಾಗಿ ಬದುಕಬೇಕು ಎಂದು ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಹೇಳಿದರು. ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ನಡೆದ 67ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವತಂತ್ರ್ಯ ಭಾರತದಲ್ಲಿ ಬಡತನ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳು ನಮಗೆ ಸವಾಲಾಗಿವೆ. ಬೌದ್ಧಿಕ ಸಾಮರ್ಥ್ಯದ ಶಕ್ತಿಯ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ತಿಳಿಸಿದರು. ಉಪನ್ಯಾಸಕ ಡಾ.ಎಸ್. ಮಂಗಳಮೂರ್ತಿ ಮಾತನಾಡಿದರು. 2012- 13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಎಚ್.ಎಂ. ಅಭಿಷೇಕ್, ಜೆ.ಸಿ. ಸುಬ್ರಮಣ್ಯ, ಜಿ.ಎಸ್. ಸ್ವಾತಿ ಹಾಗೂ ದ್ವಿತೀಯ ಪಿಯುಪಿ ವಿದ್ಯಾರ್ಥಿ ಎಚ್.ವಿ. ವಿಶ್ವಾಸ್ ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಸ್. ಸುಂದರ್ರಾಜ್, ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಲೋಕೋಪಯೋಗಿ ಎಇಇ ನಟರಾಜು, ಜಿಪಂ ತಾಂತ್ರಿಕ ಉಪ ವಿಭಾಗದ ಎಇಇ ಎಸ್.ಆರ್. ಪುರುಷೋತ್ತಮ ಇದ್ದರು.
ಪ್ರತಿಭಾ ಪುರಸ್ಕಾರ
ಟಿ. ನರಸೀಪುರ: ಗಾಣಿಗ ಸಂಘದಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. 2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಗಾಣಿಗ ಸಮುದಾಯದ ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಆ. 25 ರೊಳಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9916621138 ಸಂಪರ್ಕಿಸಬಹುದು.