ಏಕರೂಪದ ಮರಳು ನೀತಿ ಜಾರಿಗೆ ಆಗ್ರಹ
ಟಿ. ನರಸೀಪುರ: ಮರಳುಗಾರಿಕೆಗೆ ರಾಜ್ಯದಲ್ಲಿ ಏಕರೂಪ ಮರಳು ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ದಿ ಮೈಸೂರು ಸಿಟಿ ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ ಆಗ್ರಹಿಸಿದರು.
ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿರುವ ಮರಳು ನೀತಿ ಇಡಿ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಜಿಲ್ಲೆಗೊಂದು ನಿಯಮ, ರಾಜ್ಯಕ್ಕೊಂದು ಕಾನೂನು ಇರುವುದು ಆಡಳಿತದಲ್ಲಿ ಹಾಗೂ ಕಾನೂನು ಪಾಲನೆಯಲ್ಲಿ ತಾರತಮ್ಯವಾಗುತ್ತದೆ ಎಂದು ತಿಳಿಸಿದರು.
ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಸಲೆ ಎಂ.ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಾಲೀಕರ ಒಕ್ಕೂಟದ ಉಪಾಧ್ಯಕ್ಷ ಕೋದಂಡರಾಮ, ಗ್ರಾಮಾಂತರ ಕಟ್ಟಡ ಸಾಮಗ್ರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಅಸ್ಗರ್ ಅಹಮದ್ ಇದ್ದರು.