ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಕರೆ
ಹುಣಸೂರು: ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ, ಬುದ್ಧಿ ಕಲಿಸಿದರೆ ಮಾತ್ರ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶೇಖರ್ ಗೆಲ್ಲುವ ಮೂಲಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಬೆಲೆ ಸಿಗುತ್ತದೆ ಎಂದು ರಾಜ್ಯ ಸಹಕಾರ ಮಹಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಇಲ್ಲಿನ ಅದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಯ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಎರಡು ವಾರ್ಡ್ ಸಭೆ ನಡೆಸದ ಅಥವಾ ಸದಸ್ಯರು ಗೈರುಹಾಜರಿಯಾದಲ್ಲಿ ಅವರ ಸದಸ್ಯತ್ವ ರದ್ದು ಮತ್ತು ಜೈಲಿಗೆ ಕಳುಹಿಸುವೆ ಎಂದು ಕಾಂಗ್ರೆಸ್ ಮಸೂದೆ ಜಾರಿಗೆ ತಂದಿದೆ. ಇದನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಅರಿತುಕೊಳ್ಳುವಂತೆ ತಿಳಿಸಿದರು.
ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಮದ ಯು.ಎಸ್. ಶೇಖರ್ ಅವರನ್ನು ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದೆ. ತವರು ಕ್ಷೇತ್ರದ ಶೇಖರ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ, ಸಹಕಾರ ಕ್ಷೇತ್ರದಲ್ಲಿ ರೈತರ ಸಾಲ ಮನ್ನಾ ಮಾಡಿದ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ಟೀಕೆ ಟಿಪ್ಪಣಿ ಮಾಡುವ ಮೊದಲು ತಾವು ಯಾವ ಪಕ್ಷದಿಂದ ಬಂದಿದ್ದೀರಿ ಅನ್ನುವುದನ್ನು ಮರೆಯಬೇಡಿ ಎಂದು ಹೇಳಿದರು.
ಅನುದಾನ ಬಿಡುಗಡೆ ಮಾಡಿಲ್ಲ: ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಯಾವ ಸ್ಥಳೀಯ ಜನಪ್ರತಿನಿಧಿಗಳ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಅನುದಾನವು ಬಿಡುಗಡೆ ಮಾಡಿಲ್ಲ ಸುಳ್ಳು ಭರವಸೆಗಳನ್ನು ಸುರಿಸುತ್ತಾರೆ. ಆದ್ದರಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಗೊಂದಲ ಸೃಷ್ಟಿ ಮಾಡಿ ಮತ ಪಡೆಯಲು ಯತ್ನಿಸುತ್ತಾರೆ ಎಂದರು.
ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರು ಮೂರು ಪಕ್ಷದ ವರಿಷ್ಠರು ಸೇರಿ ಹುಣಸೂರಿನ ಮಗನನ್ನು ಈ ಉಪ ಚುನಾವಣೆಯ ಸ್ಪರ್ಧೆಗೆ ನಿಲ್ಲಿಸಿದ್ದಾರೆ. ಅತ್ಯಧಿಕ ಮತಗಳನ್ನು ನೀಡುವಂತೆ ಕೋರಿದರು.
ಕೆಲಕಾಲ ಗೊಂದಲ: ಜಿಪಂ ಮಾಜಿ ಸದಸ್ಯ ತೋಂಡಾಳು ರಾಮಕೃಷ್ಣೇಗೌಡ ಮಾತನಾಡಿ, ವೇದಿಕೆಯ ಮೇಲೆ ಪಕ್ಷಕ್ಕಾಗಿ ದುಡಿದವರನ್ನು ಕೂರಿಸಿ, ಪಕ್ಷ ವಿರೋಧಿಗಳನ್ನು ಕೂರಿಸಬೇಡಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು ಅವರಿಗೆ ಮನವಿ ಮಾಡುತ್ತಿದ್ದಂತೆ ಕೆಲವು ಕಾರ್ಯಕರ್ತರೊಂದಿಗೆ ಕೆಲ ಕಾಲ ಮಾತಿನ ಚಕಮಕಿ ನಡೆದು, ಗೊಂದಲ ಸೃಷ್ಟಿಯಾಯಿತು. ನಂತರ ಜಿಟಿಡಿ ಸಭೆಗೆ ಬರುತ್ತಿದ್ದಂತೆ ಗೊಂದಲಕ್ಕೆ ತೆರೆ ಎಳೆದು ಸಮಾರಂಭ ಯಶಸ್ವಿಯಾಗಿ ನಡೆಯಿತು.
ಮಾಜಿ ಶಾಸಕ ವಿ.ಪಾಪಣ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಜೀವ್, ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಸಿದ್ದಲಿಂಗೇಗೌಡ ಮಾತನಾಡಿದರು. ಜಿಪಂ ಸದಸ್ಯರಾದ ಕೆ.ಎಂ. ಮಂಜು, ದೇವರಾಜು, ಜಿಪಂ ಮಾಜಿ ಸದಸ್ಯರಾದ ನಾಗರಾಜ ಮಲ್ಲಾಡಿ, ಕಡಕೊಳ ನಾಗರಾಜು, ಕೋಟೆ ವೆಂಕಟೇಶ್ ಇದ್ದರು.