ಬೈಲಕುಪ್ಪೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಕ.ಪ್ರ. ವಾರ್ತೆ, ಬೈಲುಕುಪ್ಪೆ, ಆ.16
ಅಶುಚಿತ್ವ ನಿರ್ಮೂಲನೆ ಆಗಬೇಕಾದರೆ ಹೆಣ್ಣುಮಕ್ಕಳು ದೃಢ ನಿರ್ಧಾರ ತೆಗೆದುಕೊಂಡರೆ ಮಾತ್ರ ಸಾಧ್ಯ ಎಂದು ಸಬ್ ಇನ್ಸ್ಪೆಕ್ಟರ್ ರಾಮನಾಯಕ್ ಹೇಳಿದರು.
ಅಂಗನವಾಡಿ ಕೇಂದ್ರದಲ್ಲಿ ನಡೆದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಹಿಳೆಯರ ಸಂಘ ಸಂಸ್ಥೆ ವತಿಯಿಂದ ಅಭಿವೃದ್ಧಿ ಜತೆಗೆ ನಿಮ್ಮ ಮನೆಯ ಮುಂಭಾಗದ ಒಳ ಚರಂಡಿಯನ್ನು ಸ್ವಚ್ಛ ಮಾಡಿಕೊಂಡರೆ ರೋಗ, ರುಜಿನಗಳು ಬಾರದಂತೆ ತಡೆಯಬಹುದು ಎಂದು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಯೋಗ ಮಾತನಾಡಿ, ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆಯನ್ನು ಕಡ್ಡಾಯವಾಗಿ ನಿಲ್ಲಿಸಿ, ನಿಮ್ಮ ಮನೆಗೆ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಮಹಿಳೆಯರೆಲ್ಲರೂ ಮುಂದಾಗಬೇಕು. ಗ್ರಾಪಂ ವತಿಯಿಂದ 9,200 ಕೊಡುತ್ತೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಒಂದು ಸಾವಿರ ರು.ಗಳನ್ನು ಕೊಡುತ್ತಾರೆ. ಈ ಸೌಕರ್ಯ ಪಡೆದು ಶೌಚಾಲಯ ಕಟ್ಟಿಸಿಕೊಳ್ಳಬೇಕು. ಪ್ಲಾಸ್ಟಿಕ್ ಕೊಳ್ಳುವುದನ್ನು ಕಡ್ಡಾಯವಾಗಿ ನಿಲ್ಲಿಸಿ, ಇದರಿಂದ ರೋಗ, ರುಜಿನಗಳನ್ನು ಬಾರದಂತೆ ತಡೆಯಬಹುದೆಂದು ಹೇಳಿದರು.