ಮಂಜುಳಾ ವಿರುದ್ಧ ಕ್ರಿಮಿನಲ್ ಕೇಸ್ಗೆ ಒತ್ತಾಯ
ಮೈಸೂರು: ತಾಲೂಕಿನ ಹೊಸಹುಂಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಅವರು ದಲಿತ ಮಹಿಳೆಗೆ ಮನೆ ಕಟ್ಟಿಸಿಕೊಡುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಮಾಜ ಪರಿವರ್ತನ ಜನಾಂದೋಲನ- ಕರ್ನಾಟಕ ಸಂಘಟನೆ ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಮುಖ್ಯಮಂತ್ರಿ ಅವರನ್ನು ಮೆಚ್ಚಿಸುವ ಸಲುವಾಗಿ ಮಂಜುಳಾ ಮಂಜುನಾಥ್ ದಲಿತರಿಗೆ ಆಮಿಷ ಒಡ್ಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಪದಾಧಿಕಾರಿಗಳಾದ ಡಾ.ಕೃಷ್ಣಮೂರ್ತಿ ಚಮರಂ, ಎಂ. ರವೀಂದ್ರ, ಕೇಶವ ನಾಗರಾಜ್, ಪರಶುರಾಂ, ಶಾಲಿನ ಎಸ್. ಕೌಂಡಿನ್ಯ ಖಂಡಿಸಿದ್ದಾರೆ.
ಮೂವರಿಗೆ ನೋಟಿಸ್ ಜಾರಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಮಂಜುಳಾ ನೀಲೇಗೌಡ, ಗ್ರಾಪಂ ಸದಸ್ಯ ಎನ್. ಬಸವೇಗೌಡ ಅವರಿಗೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ: ಇಬ್ಬರ ಸೆರೆ
ಮೈಸೂರು: ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಯುವಕರನ್ನು ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ. ಕೊಪ್ಪಲಿನ ನಿವಾಸಿಗಳಾದ ರಾಕಿ (26) ಮತ್ತು ಅನಿಲ್ (27) ಬಂಧಿತರು. ಇವರು ಕಳೆದ ರಾತ್ರಿ ಕುಡಿದು ಗುಂಪುಗೂಡಿ ಅಡ್ಡಾಡುತ್ತಿದ್ದಾಗ ಕುವೆಂಪುನಗರ ಪೊಲೀಸರು ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮೇಲೆ ರಾಕಿ ಮತ್ತು ಅನಿಲ್ ಹಲ್ಲೆ ನಡೆಸಿದ್ದಾರೆ. ಕೂಡಲೆ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು, ಶುಕ್ರವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಇಬ್ಬರು ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಊರಿಗೆ ತೆರಳಿದ ತಮ್ಮ ತಾಯಿ ನಾಪತ್ತೆ ಆಗಿದ್ದಾರೆ ಎಂದು ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯ ಗೋಕುಲಂ ನಿವಾಸಿ ಮಂಜುಳಾ ದೂರು ನೀಡಿದ್ದಾರೆ. ಕೆ.ಆರ್. ನಗರ ತಾಲೂಕು ಅರಕೆರೆ ನಿವಾಸಿ ಜವರಮ್ಮ (55) ನಾಪತ್ತೆಯಾದವರು. ಮಗಳ ಮನೆಗೆ ಬಂದಿದ್ದ ಜವರಮ್ಮ ಊರಿಗೆ ಹಿಂದಿರುಗುವಾಗ ನಾಪತ್ತೆಯಾಗಿದ್ದಾರೆ. ತೆಳ್ಳನೆ ಶರೀರ, ಗೋದಿ ಮೈ ಬಣ್ಣ, ದುಂಡು ಮುಖ, 4.7 ಅಡಿ ಎತ್ತರ ಇರುವ ಇವರು ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ದೂ.0821-2418339, 2418340 ಸಂಪರ್ಕಿಸಬಹುದು. ಪಾಂಡವಪುರದ ಪಿ.ಎಸ್. ರಸ್ತೆಯ ನಿವಾಸಿ ಬಾಲಾಜಿಸಿಂಗ್ ಎಂಬವರ ಪುತ್ರಿ ಬಿ.ಶಾಲಿನಿಬಾಯಿ (19) ನಾಪತ್ತೆಯಾಗಿದ್ದಾರೆ. ಮೈಸೂರಿನ ಕಣ್ಣನ್ಲ್ಯಾಬ್ಗೆ ಕೆಲಸಕ್ಕೆ ಬರುತ್ತಿದ್ದರು. 5.5 ಅಡಿ ಎತ್ತರ, ಗುಂಡು ಮುಖ, ಎಣ್ಣೆಗೆಂಪು ಬಣ್ಣ, ದೃಢಕಾಯ ಶರೀರ ಇರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಮಂಡಿ ಠಾಣೆ ದೂ. 2418113 ಸಂಪರ್ಕಿಸಬಹುದು.
ರೈಲಿಗೆ ಸಿಕ್ಕಿ ಸಾವು
ಮೈಸೂರು: ನಗರದ ರೈಲು ನಿಲ್ದಾಣದ ಯಾರ್ಡ್ನಲ್ಲಿ ರೈಲಿಗೆ ಸಿಕ್ಕಿ 25 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. 5.6 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಮೃತನ ತಲೆ ರೈಲುಗಾಡಿಗೆ ಸಿಲುಕಿ ಕುತ್ತಿಗೆ ನೇರಕ್ಕೆ ಕತ್ತರಿಸಿ ನಾಪತ್ತೆಯಾಗಿದೆ. ಸಿಮೆಂಟ್ ಮತ್ತು ಬಿಳಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್, ನೀಲಿ ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್, ಕಾಫಿ ಬಣ್ಣದ ನಿಕ್ಕರ್, ಕಂದು ಬಣ್ಣದ ಚಪ್ಪಲಿ ಧರಿಸಿದ್ದಾರೆ. ಇವರ ಮೃತದೇಹ ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿದೆ. ಮೃತರ ವಾರಸುದಾರರು ಇದ್ದಲ್ಲಿ ರೇಲ್ವೆ ಠಾಣೆ ದೂ. 0821-2516579 ಸಂಪರ್ಕಿಸಬಹುದು.
ದೇಶದ ಅಭಿವೃದ್ಧಿ ಆಶಯ
ಮೈಸೂರು: : ಸಂವಿಧಾನ ರಚನೆ ಹಾಗೂ ದೇಶದ ಅಭಿವೃದ್ಧಿ ಆಶಯವನ್ನು ಸಂವಿಧಾನ ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಹೇಳಿದರು. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕುಲಸಚಿವ ಡಾ. ಎಂ. ಬಸವಣ್ಣ, ಪರೀಕ್ಷಾಂಗ ಕುಲಸಚಿವ ಡಾ. ಎಂ.ಎಸ್. ಶೇಖರ್ ಮತ್ತು ವಿವಿಯ ಸಿಬ್ಬಂದಿ ಇದ್ದರು.