ಮೂವರು ಮಕ್ಕಳು ಬಾಲಮಂದಿರಕ್ಕೆ
ಮೈಸೂರು: ನಂಜನಗೂಡು ರಸ್ತೆಯ ಸ್ಮಶಾನದ ಬಳಿ ಅಡ್ಡಾಡುತ್ತಿದ್ದ ಹಾಸನ ಮೂಲದ ಮೂವರು ಮಕ್ಕಳು ಮತ್ತು ಓರ್ವ ಯುವತಿಯನ್ನು ಸಾರ್ವಜನಿಕರು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.
ಸರಿಯಾದ ಮಾಹಿತಿ ಇಲ್ಲದೆ ಅಡ್ಡಾಡುತ್ತಿದ್ದ ಈ ಗುಂಪನ್ನು ಕಂಡ ಸಾರ್ವಜನಿಕರು ಬಾಲಮಂದಿರಕ್ಕೆ ಕರೆತಂದು ಬಿಟ್ಟಿದ್ದಾರೆ. ಈ ಬಗ್ಗೆ ಬಾಲನ್ಯಾಯ ಮಂಡಳಿ ಸದಸ್ಯ ಪಿ.ಪಿ. ಬಾಬುರಾಜ್ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಪ್ರಸನ್ನಕುಮಾರ್ ಅವರು ಕೆ.ಆರ್. ನಗರ ಠಾಣೆಗೆ ಭೇಟಿ ನೀಡಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ.
ಹಾಸನ ಮೂಲದ 19 ವರ್ಷದ ಯುವತಿಗೆ ಬಾಲ್ಯ ವಿವಾಹವಾಗಿ ಒಂದು ಮಗು ಇದೆ. ತನ್ನ ತಮ್ಮನನ್ನು ಹುಡುಕಿಕೊಂಡು ಮೈಸೂರಿಗೆ ಬಂದಿರುವುದಾಗಿ ಆಕೆ ತಿಳಿಸಿದ್ದಾಳೆ. ಆಕೆಯ ತಮ್ಮ ಮೈಸೂರಿನ ಸ್ಮಶಾನದಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಾನೆ ಎಂಬ ಖಚಿತ ಮಾಹಿತಿ ಆಧರಿಸಿ ಆಕೆ ಸ್ಮಶಾನದ ಬಳಿ ತಿರುಗಾಡುವಾಗ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾರೆ.
ಯುವತಿಯ ಜತೆಗಿದ್ದ ಮೂವರು ಮಕ್ಕಳು ಸಲ್ಯೂಷನ್, ವೈಟ್ನರ್ನಂತಹ ನಶೆಯ ಚಟಕ್ಕೆ ಅಂಟಿಕೊಂಡಿದ್ದಾರೆ. ಈ ಮಕ್ಕಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಗಂಡು ಮಕ್ಕಳಿಬ್ಬರನ್ನು ಬಾಲಕರ ಬಾಲಮಂದಿರಕ್ಕೂ, ಯುವತಿ ಮತ್ತು ಬಾಲಕಿಯನ್ನು ಲಲಿತಮಹಲ್ ರಸ್ತೆಯ ಬಾಲಕಿಯರ ಬಾಲಮಂದಿರಕ್ಕೂ ಕಳುಹಿಸಲಾಗಿದೆ. ನಾಳೆ ಇವರನ್ನು ಜಿಲ್ಲಾ ಮಕ್ಕಳ ಸಮಿತಿ ಮುಂದೆ ಹಾಜರುಪಡಿಸುವುದಾಗಿ ಪಿ.ಪಿ. ಬಾಬುರಾಜ್ ತಿಳಿಸಿದ್ದಾರೆ.