ಸಂಸದರಿಂದ ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ಭೇಟಿ
ಮೈಸೂರು: ರಾಜ್ಯದಲ್ಲಿ ತಂಬಾಕು ಬೆಳೆಗಾರರು ಬೆಳೆದಿರುವ ಎಲ್ಲ ತಂಬಾಕನ್ನು ಸರ್ಕಾರವೇ ಖರೀದಿ ಮಾಡಬೇಕು ಮತ್ತು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಪ್ರಮುಖ ಬೆಳೆಯಾಗಿರುವ ಕಾಫಿಯನ್ನು ರಾಷ್ಟ್ರೀಯ ಪಾನೀಯವೆಂದು ಘೋಷಿಸುವಂತೆ ಸಂಸದರಾದ ಎಚ್. ವಿಶ್ವನಾಥ್, ಜಯಪ್ರಕಾಶ್ ಹೆಗ್ಡೆ, ಆರ್. ಧ್ರುವನಾರಾಯಣ್ ಅವರು ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕಾಫಿ ಬೆಳೆಗಾರರು ಮತ್ತು ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾದ ಸಂಸದರು, ಮಧ್ಯಮ ಮತ್ತು ದೊಡ್ಡ ಕಾಫಿ ಬೆಳೆಗಾರರ ಸಾಲದ ಬಡ್ಡಿ ಮನ್ನಾ ಮಾಡಬೇಕು ಹಾಗೂ ಕಾಫಿ ಮಂಡಳಿಗೆ ಸದಸ್ಯರ ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಫಿಯನ್ನು ರಾಷ್ಟ್ರೀಯ ಪಾನೀಯವೆಂದು ಘೋಷಣೆ ಮಾಡಬೇಕೆಂದು ವಾಣಿಜ್ಯ ಸಚಿವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ತಂಬಾಕು ಬೆಳೆಗಾರರು ಬೆಳೆದಿರುವ ಎಲ್ಲ ತಂಬಾಕನ್ನು ಸರ್ಕಾರವೇ ಖರೀದಿ ಮಾಡಬೇಕು ಹಾಗೂ ತಂಬಾಕಿಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿರುವ ಬೆಲೆ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಕೇಂದ್ರ ಸಚಿವರನ್ನು ಕೋರಿದ್ದೇವೆ. ತಮ್ಮ ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ನಮಗೆ ನೀಡಿದ್ದಾರೆ ಎಂದು ಸಂಸದ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.