ಸೋಸಲೆಯಲ್ಲಿ ಸಕಾಲ ಉಪ ಕೇಂದ್ರ ಉದ್ಘಾಟನೆ
ಟಿ. ನರಸೀಪುರ: ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಶುಕ್ರವಾರ ಸೋಸಲೆ ಗ್ರಾಪಂ ಅಧ್ಯಕ್ಷ ಎಚ್. ಅಣ್ಣಯ್ಯಸ್ವಾಮಿ ಸಕಾಲ ಉಪಕೇಂದ್ರ ಉದ್ಘಾಟಿಸಿದರು.
ವ್ಯಾಸರಾಜಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ಸೋಸಲೆ ನಾಡ ಕಚೇರಿ ಅಧಿಕಾರಿಗಳು ಸಕಾಲ ಉಪಕೇಂದ್ರ ತೆರೆಯಲು ಖಾಸಗಿ ಸಹಭಾಗಿತ್ವದಲ್ಲಿ ಚಿಂತನೆ ನಡೆಸಿರುವ ಹಿನ್ನೆಲೆ ಈ ಕೇಂದ್ರವನ್ನು ಆರಂಭಿಸಲಾಯಿತು.
ಕಚೇರಿ ಉದ್ಘಾಟಿಸಿದ ಅಣ್ಣಯ್ಯಸ್ವಾಮಿ ಮಾತನಾಡಿ, ಸರ್ಕಾರದ ಮಹತ್ವದ ಯೋಜನೆ ಸಕಾಲ ಹಾಗೂ ಅಂತರ್ಜಾಲ ಸೇವಾ ಸೌಲಭ್ಯ ಗ್ರಾಮೀಣ ಜನರಿಗೂ ಲಭ್ಯವಾಗಬೇಕು. ಪಡಿತರ ಚೀಟಿಗೆ ಗ್ರಾಮೀಣ ಜನರು ಪಟ್ಟಣದ ಪ್ರದೇಶದಲ್ಲಿ ಪರದಾಡುವ ಹಿನ್ನೆಲೆ ವ್ಯಾಸರಾಜಪುರ ಗ್ರಾಮದಲ್ಲಿ ಸಕಾಲ ಉಪಕೇಂದ್ರ ಪ್ರಾರಂಭಿಸಲು ತಹಸೀಲ್ದಾರರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷ ಟಿ.ರಂಗಸ್ವಾಮಿ, ಮಾಜಿ ಅಧ್ಯಕ್ಷ ನಾಗಣ್ಣ, ಮುಖ್ಯ ಶಿಕ್ಷಕ ಡಿ. ರಂಗಸ್ವಾಮಿ, ಮುಖಂಡರಾದ ಎಸ್.ಪಿ. ಸುಂದರ್, ವಿ.ಡಿ. ರಂಗಸ್ವಾಮಿ, ಇಂದ್ರೇಶ್, ಕೃಷ್ಣ, ಮಲ್ಲಿಕಾರ್ಜುನ, ರಾಮಚಂದ್ರ, ಸುಂದರನಾಯ್ಕ, ರಜಿನಿ, ದಯಾನಂದ, ಮಂಜುನಾಥ್, ಶಾಂತಕುಮಾರ್ ಇದ್ದರು.