ಅಚ್ಚುಕಟ್ಟಿಗೆ ನುಗು ನೀರು ಬಿಡುಗಡೆ
ಕ.ಪ್ರ. ವಾರ್ತ್ಣೆ ಮೈಸೂರ್ಣು ಆ.17
ಎಚ್.ಡಿ. ಕೋಟೆ ತಾಲೂಕಿನ ನುಗು ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮೇಲ್ದಂಡೆ ನಾಲೆ, ಬಲದಂಡೆ ನಾಲೆ ಹಾಗೂ ಎಡದಂಡೆ ನಾಲೆಗಳಿಂದ ಅಚ್ಚುಕಟ್ಟುಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಈ ಸಾಲಿನ ಖಾರೀಫ್ ಬೆಳೆಗೆ ಹಾಲಿ ನುಗು ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ ಪ್ರಸಕ್ತ ಸಾಲಿನಲ್ಲಿ ಅಂದರೆ 2013ರ ಖಾರೀಫ್ ಬೆಳೆಗೆ ಅಲ್ಪಾವಧಿ ಬತ್ತದ ಬೆಳೆಗೆ ಕಟ್ಟು ನೀರಿನ ವ್ಯವಸ್ಥೆಯಂತೆ ನೀರು ಸರಬರಾಜು ಮಾಡಲಾಗುತ್ತದೆ.
ಜಲಾಶಯದ ನೀರಿನ ಮಟ್ಟವನ್ನು ಮತ್ತು ಮಳೆಯನ್ನು ಅನುಸರಿಸಿ ಅವಶ್ಯಕತೆ ಕಂಡುಬಂದಾಗ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗುವುದು. ಸಂಬಂಧಪಟ್ಟ ರೈತರು ಕಾಲುವೆಯಲ್ಲಿ ಬಿಡಲಾಗುವ ನೀರನ್ನು ಕೃಷಿ ಇಲಾಖೆಯ ಸಲಹೆ ಪಡೆದು ಸೂಕ್ತ ತಳಿಯ ಅಲ್ಪಾವಧಿ ಬತ್ತದ ಬೆಳೆಗಳನ್ನು ಬೆಳೆಯಬೇಕು ಎಂದು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ಅಚ್ಚುಕಟ್ಟು ಪ್ರದೇಶಗಳಿಗೆ ಆ.1 ರಿಂದ 30 ರವರೆಗೆ ಕಟ್ಟು ನೀರು, ನೀರು ಸರಬರಾಜು ಮಾಡುವ ವಿಸ್ತೀರ್ಣ ನುಗು ಬಲದಂಡೆ ನಾಲೆ 3253 ಎಕರೆ, ನುಗು ಎಡದಂಡೆ ನಾಲೆ 1958 ಎಕರೆ, ನುಗು ಮೇಲ್ದಂಡೆ ನಾಲೆ 13000 ಎಕರೆಗೆ ನೀರು ಹರಿಸಲಾಗುತ್ತದೆ. ಒಟ್ಟು 30 ದಿನಗಳು. ಸೆ.10 ರಿಂದ 24 ರವರೆಗೆ ಒಟ್ಟು 15 ದಿನಗಳು, ಅ.5 ರಿಂದ 19 ರವರೆಗೆ ಒಟ್ಟು 15 ದಿನಗಳು, ಅ.30 ರಿಂದ ನ.13 ರವರೆಗೆ ಒಟ್ಟು 15 ದಿನಗಳು ನೀರು ಬಿಡಲಾಗುತ್ತದೆ.
ನೀರು ನಿಲ್ಲಿಸುವ ಅವಧಿ: ನೀರು ನಿಲ್ಲಿಸುವ ಅವಧಿ ಆ.31 ರಿಂದ ಸೆ.9 ರವರೆಗೆ ಒಟ್ಟು 10 ದಿನ. ಸೆ.25 ರಿಂದ ಅ.4 ರವರೆಗೆ ಒಟ್ಟು 10 ದಿನ, ಅ.20 ರಿಂದ 29 ರವರೆಗೆ ಒಟ್ಟು 10 ದಿನಗಳು, ನ.14 ರಿಂದ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.
ನೀರಿನ ನಿಯಂತ್ರಣವನ್ನು ನುಗು ಜಲಾಶಯದಲ್ಲಿ ಸದ್ಯದಲ್ಲಿ ಇರುವ ನೀರಿನ ಶೇಖರಣೆ ಮತ್ತು ಜಲಾಶಯಕ್ಕೆ ಬರುವ ನೀರಿನ ಅಂದಾಜಿನ ಪ್ರಮಾಣದ ಆಧಾರದ ಮೇಲೆ ಮಾಡಲಾಗಿದೆ. ಇಂತಹ ನಿಯಂತ್ರಣ ಸೌಲಭ್ಯದಲ್ಲಿ ಮುಂದೆ ಯಾವುದೇ ನಿಯಂತ್ರಣ ವ್ಯತ್ಯಾಸ ನೀರಿನ ಕೊರತೆ ಅಥವಾ ಬೆಳೆ ನಷ್ಟವಾದಲ್ಲಿ ಇಲಾಖೆಯವರು ಜವಾಬ್ದಾರರಲ್ಲ. ಹಾಗೂ ರೈತ ಬಾಂಧವರಿಗೆ ಬೆಳೆ ಪರಿಹಾರ ಕೇಳಲು ಯಾವ ಹಕ್ಕು ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನೀರಿನ ಕೊರತೆ ತೀವ್ರವಾಗಿರುವುದರಿಂದ ಎಲ್ಲಾ ನಾಲೆಗಳ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಿಡಲಾಗುವುದು. ರೈತರು ನೀರನ್ನು ಅಲ್ಪಾವಧಿ ಬತ್ತದ ಬೆಳೆಗೆ ಹಾಯಿಸಿಕೊಂಡು ಇಲಾಖೆಯೊಂದಿಗೆ ಸಹಕರಿಸಬೇಕು. ಹೆಚ್ಚಿನ ವಿವರಗಳನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಂ.3, ಕಬಿನಿ ನಾಲಾ ಉಪವಿಭಾಗ, ಹುಲ್ಲಹಳ್ಳಿ ಇವರಲ್ಲಿ ಪಡೆಯಬಹುದು.