ಆಹಾರ ಭದ್ರತೆ ಜಾರಿಗೆ ವಿಪಕ್ಷಗಳ ಅಡ್ಡಿ: ವಿಶ್ವನಾಥ್
ಕ.ಪ್ರ.ವಾರ್ತೆ ಹುಣಸೂರು ಆ. 17
ದೇಶದ ಬಡ ಜನರಿಗಾಗಿ ಆಹಾರ ಭದ್ರತೆ ಯೋಜನೆ ಜಾರಿಗೆ ತರುತ್ತಿರುವ ಕೇಂದ್ರದ ಯುಪಿಎ ಸರ್ಕಾರವನ್ನು ಬಿಜೆಪಿ ಮತ್ತಿತರ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಸಂಸದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಪವನ್ಜಲ್ನಲ್ಲಿ ನಡೆದ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಆಹಾರ ಭದ್ರತೆ ಯೋಜನೆ ಜಾರಿಗೆ ತರಲು ಬಿಜೆಪಿ ಬಿಡುತ್ತಿಲ್ಲ. ಬಿಜೆಪಿಯ ಮೋದಿ ದೇಶದ ಮಾನ ಹರಾಜು ಹಾಕಲು ನಿಂತಿದ್ದಾರೆ. ಈತ ದೇಶದ ಪ್ರಧಾನಿಯಾಗಬೇಕಂತೆ ಎಂದು ವ್ಯಂಗ್ಯವಾಡಿದರು.
ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಧರ್ಮಸೇನ ಅವರನ್ನು ಬೆಂಬಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಜಾರಿಗೆ ತಂದಿರುವ 1 ಅಕ್ಕಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತ್ತು ದಲಿತ ಸಮೂಹಗಳ ಸಾಲ ಮನ್ನಾ, ಕ್ಷೀರಭಾಗ್ಯ ಯೋಜನೆಯಿಂದ ಕಂಗೆಟ್ಟ ಜೆಡಿಎಸ್ ಮುಖಂಡರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅವರ ಹತಾಶ ಭಾವನೆ ತೋರಿಸುತ್ತದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿರೋದು ಡೋಂಗಿ ಜೆಡಿಎಸ್ ವರಿಷ್ಠರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೊಟ್ಟೆಕಿಚ್ಚು ಪಡುವ ಇವರು ಜಾತ್ಯತೀತ ಹೆಸರಿನಲ್ಲಿ ಜನತೆಗೆ ವಂಚನೆ ಮಾಡುತ್ತಿದ್ದಾರೆ. ಹೀಗೆ ಮಾತನಾಡಿದರೆ ನನ್ನನ್ನು ಒಕ್ಕಲಿಗರ ವಿರೋಧಿ ಅಂತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಕೈ ಬಲಪಡಿಸಿ: ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಧರ್ಮಸೇನ ಅವರಿಗೆ ಮತ ನೀಡುವಂತೆ ಕರೆ ನೀಡಿದರು.
ಗ್ರಾಪಂ ಸಬಲೀಕರಣಕ್ಕೆ ಒತ್ತು ನೀಡಿ ಸದಸ್ಯರು ಕಡ್ಡಾಯವಾಗಿ ಗ್ರಾಮ ಸಭೆಗೆ ಹಾಜರಾಗಲು ಕಾನೂನು ಜಾರಿ ಮಾಡಲಾಗಿದೆ. ಜೆಡಿಎಸ್ನವರು ಅದನ್ನೇ ತಪ್ಪಾಗಿ ಅರ್ಥೈಸಿ ಗ್ರಾಪಂ ಸದಸ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಾಧಕ- ಬಾಧಕದ ನಂತರವಷ್ಟೇ ಕಾನೂನು ಜಾರಿ ಮಾಡಲಾಗುತ್ತದೆ.
ಜೆಡಿಎಸ್ ಸೋಲುವ ಭೀತಿಯಿಂದ ಕೆಜೆಪಿಗೆ ಬೆಂಬಲ ನೀಡುತ್ತಿದೆ. ಚುನಾಯಿತ ಪ್ರತಿನಿಧಿಗಳು ಹಣಕ್ಕಾಗಿ ಮತ ಮಾರಿಕೊಳ್ಳದೆ ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಅವರು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ವೀಕ್ಷಕ ಮಾಲೇಗೌಡ, ಜಿಪಂ ಸದಸ್ಯರಾದ ಡಾ.ಪುಷ್ಪ ಅಮರ್ನಾಥ್, ಮಂಜುಳ, ಎಐಸಿಸಿ ಮಾಜಿ ಸದಸ್ಯ ಎಚ್.ಎನ್. ಪ್ರೇಮಕುಮಾರ್, ಜಿಲ್ಲಾಧ್ಯಕ್ಷ ಹಾಗೂ ಅಭ್ಯರ್ಥಿ ಧರ್ಮಸೇನ, ಮುಖಂಡರಾದ ಸ್ವಾಮಿಗೌಡ, ಡಿ.ಕೆ. ಕುನ್ನೇಗೌಡ ಇದ್ದರು.