ಇಂದು, ನಾಳೆ ಉಚಿತ ತಪಾಸಣೆ
ಮೈಸೂರು: ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರವು ಸಾರ್ವಜನಿಕರ ಅನುಕೂಲಕ್ಕಾಗಿ ಆ.18 ಮತ್ತು 19 ರಂದು ವೈದ್ಯಕೀಯ ಉಚಿತ ತಪಾಸಣೆ ಶಿಬಿರ ಹಾಗೂ ಮೂಳೆ ಸಾಂದ್ರತಾ ಪರೀಕ್ಷೆ ಏರ್ಪಡಿಸಿದೆ.
19 ರಂದು ಬೆಳಗ್ಗೆ 9 ರಿಂದ 1 ರವರೆಗೆ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಜ್ಞಾ ಕುಟೀರದಲ್ಲಿ ಮಧ್ಯಾಹ್ನ 1 ರವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಮೈಸೂರು ಉಪವಿಭಾಗಾಧಿಕಾರಿ ಬಸವರಾಜು ಉದ್ಘಾಟಿಸುವರು ಎಂದು ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರ ಸಂಚಾಲಕಿ ಡಾ. ಪೂರ್ಣಿಮಾ ಕೆ. ಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19 ರಂದು ಕೇರಗಳ್ಳಿಯ ಪ್ರಜ್ಞಾ ಕುಟೀರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿರುವ ಶಿಬಿರವನ್ನು ಉಪವಿಭಾಗಾಧಿಕಾರಿ ಬಸವರಾಜು ಉದ್ಘಾಟಿಸುವರು.
ತರಕಾರಿ ಬೇಸಾಯಕ್ಕೆ ಸಹಾಯಧನ
ಮೈಸೂರು: ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಂರಕ್ಷಿತ ಘಟಕಗಳಲ್ಲಿ ಹೂ ಹಾಗೂ ತರಕಾರಿ ಬೇಸಾಯಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಘಟಕಗಳಿಗೆ ಗರಿಷ್ಠ ವೆಚ್ಚ ನಿಗದಿಯಾಗಿದ್ದು, 4000 ಚ.ಮೀ. ವಿಸ್ತೀರ್ಣಕ್ಕೆ ಶೇ.50ರ ರಿಯಾಯಿತಿಯಲ್ಲಿ ಗರಿಷ್ಠ 16.40 ಲಕ್ಷ ಸಹಾಯಧನ ನೀಡಲು ಅವಕಾಶವಿದೆ. ಘಟಕಗಳನ್ನು ಇಲಾಖೆಯಿಂದ ಅಂಗೀಕೃತಗೊಂಡ ಸಂಸ್ಥೆಗಳಿಂದ ನಿರ್ಮಾಣ ಮಾಡುವುದು ಕಡ್ಡಾಯವಾಗಿದೆ. ಆಸಕ್ತರು ತೋಟಗಾರಿಕೆ ಉಪನಿರ್ದೇಶಕರನ್ನು ಸಂಪರ್ಕಿಸಬಹುದು.
ಇಬ್ಬರು ಅಪರಿಚಿತ ವ್ಯಕ್ತಿಗಳ ಸಾವು
ಮೈಸೂರು: ನಗರದ ರೈಲು ನಿಲ್ದಾಣದ ಹಿಂಭಾಗದ ಬುಕ್ಕಿಂಗ್ ಆಫೀಸ್ ಬಳಿ 70 ವರ್ಷದ ಅಪರಿಚಿತ ವ್ಯಕ್ತಿ ಶನಿವಾರ ಮೃತಪಟ್ಟಿದ್ದಾರೆ. ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೃಶವಾದ ಶರೀರ, ಕೋಲು ಮುಖ, ತಲೆಯಲ್ಲಿ 2 ಇಂಚು ಉದ್ದದ ಬಿಳಿ ಕೂದಲು, ಬಿಳಿ ಗಡ್ಡ ಮೀಸೆ ಬಿಟ್ಟಿದ್ದಾರೆ. ಸಿಮೆಂಟ್ ಪ್ಯಾಂಟ್, ಕೆಂಪು ಉಡದಾರ, ಬಲಗೈಯಲ್ಲಿ ಕಪ್ಪು ದಾರ ಧರಿಸಿದ್ದಾರೆ. ಮೃತದೇಹವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರ ಇದ್ದಲ್ಲಿ ದೂ.0821- 2516579 ಸಂಪರ್ಕಿಸಲು ಮೈಸೂರು ರೈಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ತಂಗುದಾಣದಲ್ಲಿ ಮೃತಪಟ್ಟ ವ್ಯಕ್ತಿ: ಕೆ.ಆರ್. ಆಸ್ಪತ್ರೆ ಆವರಣದ ಜಯದೇವ ಘಟಕದ ತಂಗುದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದಾರೆ. ಚಹರೆ- 50 ವರ್ಷ, 4.9 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಹಳದಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ಚೆಕ್ ಬೌನ್ಸ್: 6.50 ಲಕ್ಷ ದಂಡ
ಮೈಸೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಕಾರಣವಾದ ವ್ಯಕ್ತಿಗೆ ಮೈಸೂರಿನ ನ್ಯಾಯಾಲಯವು 6.50 ಲಕ್ಷ ದಂಡ ವಿಧಿಸಿದೆ. ಅಲ್ಲದೆ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರಿನ ಜಯಮಹಲ್ ಬಡಾವಣೆ ನಿವಾಸಿ ಅಬ್ದುಲ್ ಜಬ್ಬರ್ ಎಂಬವರ ಪುತ್ರ ಜೆ.ಜಾವೀದ್ ಅಹಮ್ಮದ್ ಈ ಹಿಂದೆ ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿ ಕ್ಯಾಪ್ಕೇಮ್ ಕೆಮಿಕಲ್ಸ್ (ಜೆಜೆ ಡಿಸ್ಟಿಲರಿ) ನಡೆಸುತ್ತಿದ್ದರು. ಮೈಸೂರಿನ ವಿ. ತಿಮ್ಮಪ್ಪ ಅವರಿಂದ ಡಿಸ್ಟಿಲರಿಯಲ್ಲಿ ಸ್ಪಿರಿಟ್ ತಯಾರಿಸಲು ಕಾಕಂಬಿ ಖರೀದಿಸಲು 5 ಲಕ್ಷ ಪಡೆದು, ಮೂರು ತಿಂಗಳಲ್ಲಿ ಹಣ ವಾಪಸ್ ಕೊಡುವುದಾಗಿ ಹೇಳಿದ್ದರು. ಅಲ್ಲದೆ, ಭದ್ರತೆಗಾಗಿ ಬೆಂಗಳೂರಿನ ಆರ್.ಟಿ. ನಗರ ಶಾಖೆಯ ಐಸಿಐಸಿಐ ಬ್ಯಾಂಕಿನ 5 ಲಕ್ಷ ಚೆಕ್ ನೀಡಿದ್ದರು. ವಾಯಿದೆ ಮುಗಿದ ನಂತರ ಚೆಕ್ ಅನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿದಾಗ, ಜೆ. ಜಾವೀದ್ ಅಹಮ್ಮದ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಜಾವೀದ್ ವಿರುದ್ಧ ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ತಿಮ್ಮಪ್ಪ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಶಾಂತಣ್ಣ ಆಳ್ವಾ ಅವರು ಜಾವೀದ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6.50 ಲಕ್ಷ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ದಟ್ಟಗಳ್ಳಿಯಲ್ಲಿ ಸರ ಅಪಹರಣ
ಮೈಸೂರು: ಅಂಗಡಿಯಿಂದ ಮನೆಗೆ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಹಿಂಬದಿಯಿಂದ ಬಂದ ವ್ಯಕ್ತಿ ಎಗರಿಸಿಕೊಂಡು ಹೋಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ದಟ್ಟಗಳ್ಳಿ 3ನೇ ಹಂತ ನಿವಾಸಿ ನಿಂಗೇಗೌಡ ಎಂಬವರ ಪತ್ನಿ ಸರೋಜಮ್ಮ (50) ಅಂಗಡಿಯಿಂದ ಮನೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ನಡೆದುಕೊಂಡು ಬಂದ ವ್ಯಕ್ತಿ 40 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸಕ್ಕೆ ಹೋದ ಯುವಕ ನಾಪತ್ತೆ
ಮೈಸೂರು: ಗಾಂಧಿನಗರ ಸಿದ್ದಪ್ಪಾಜಿ ದೇವಸ್ಥಾನ ರಸ್ತೆ 2ನೇ ಕ್ರಾಸ್ ನಿವಾಸಿ ಲೇ. ಜವರಯ್ಯ ಎಂಬವರ ಪುತ್ರ ಪ್ರಸಾದ್ (19) ನಾಪತ್ತೆಯಾಗಿದ್ದಾರೆ.
ಆ.6 ರಂದು ಕೆಲಸಕ್ಕೆ ಹೋದ ಪ್ರಸಾದ್ ವಾಪಸ್ ಮನೆಗೆ ಬಂದಿಲ್ಲ.
ಕಾಣೆಯಾಗಿರುವ ತನ್ನ ತಮ್ಮನನ್ನು ಪತ್ತೆ ಮಾಡಿಕೊಡುವಂತೆ ನಾರಾಯಣ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.