ತಂಬಾಕು ಸೇವನೆ: ದ್ವಿಮುಖ ನೀತಿಗೆ ಕಿಡಿ
ಮೈಸೂರು: ಇತ್ತೀಚೆಗೆ ವಿಶ್ವ ತಂಬಾಕು ರಹಿತ ದಿನ ಆಚರಿಸಿದ ರಾಜ್ಯ ಸರ್ಕಾರ ಇದೀಗ ತಂಬಾಕು ಬೆಳೆಗಾರರಿಗೆ ಪ್ರಶಸ್ತಿ ನೀಡುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ಟೀಕಿಸಿದೆ. ಆ.18 ರಂದು ಮೈಸೂರಿನಲ್ಲಿ ತಂಬಾಕು ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಒಂದೆಡೆ ತಂಬಾಕು, ಗುಟ್ಕಾ ನಿಷೇಧಿಸಿರುವ ಸರ್ಕಾರದ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆ 2003ರ ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹಾಗೆ ಭಾರತ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ಜತೆ ಮಾಡಿಕೊಂಡಿರುವ ಎಫ್ಸಿಟಿಸಿ (ತಂಬಾಕು ನಿಯಂತ್ರಣ ಕುರಿತ ಒಪ್ಪಂದ)ದ 13ನೇ ಕಲಂ ಅನ್ನು ಉಲ್ಲಂಘಿಸಿದೆ ಎಂದು ಸಂಸ್ಥೆಯ ಡಾ.ಉಪೇಂದ್ರ ಭೋಜಾನಿ ಎಚ್ಚರಿಸಿದ್ದಾರೆ.
ಈ ಸಂಬಂಧ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಚಿವರೂ ಸೇರಿದಂತೆ ಮತ್ತಿತರ ಅತಿಥಿಗಳಿಗೆ ಸಂಸ್ಥೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.