ಧರಣಿ ಕುಳಿತ ಭಗ್ನ ಪ್ರೇಯಸಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 17
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನೊಬ್ಬ ಪ್ರೀತಿಸಿ ಮೋಸ ಮಾಡಿ, ಬೇರೊಬ್ಬಳ ಜತೆ ಮದುವೆಯಾಗಲು ಸಂಚು ನಡೆಸಿ ತನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ಮಿನಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಶನಿವಾರ ಪ್ರತಿಭಟಿಸಿದರು.
ಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷ ತಮ್ಮನಾಯಕ ಅವರ ಪುತ್ರ ಟಿ.ನಂದೀಶ್ ಎಂಬಾತ ಎಸ್ಬಿಎಂ ಮುಂದೆ ವಿನ್ನರ್ ಟುಟ್ಯೋರಿಯಲ್ಸ್ ನಡೆಸುತ್ತಿದ್ದು, 2009ರಲ್ಲಿ ನಾನು ನಿತ್ಯ ಪಾಠಕ್ಕೆ ಹೋಗುತ್ತಿದ್ದೆ. ಈ ವೇಳೆ ನನ್ನನ್ನು ಪ್ರೀತಿಸುತ್ತೇನೆ ಎಂದು ನಂದೀಶ ಹೇಳಿದಾಗ ನಾನು ಅದನ್ನು ನಿರಾಕರಿಸಿದೆ. ಆದರೂ ಬೆಂಬಿಡದೆ ಲೈಂಗಿಕವಾಗಿ ಬಳಸಿಕೊಂಡು ಈಗ ದೂರ ಮಾಡುತ್ತಿದ್ದಾನೆ ಎಂದು ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದ ಸೋಮಚಾರಿ ಎಂಬವರ ಪುತ್ರಿ ಗೌರಮ್ಮ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆಕೆ, ಬೇರೆ ಮದುವೆಯಾಗುವ ನಂದೀಶನ ಕಪಟ ತಿಳಿದು, ನನ್ನನ್ನೇ ಮದುವೆಯಾಗಬೇಕು ಎಂದು ಹಠ ಹಿಡಿದೆ. ಇಲ್ಲದಿದ್ದರೆ ನಿಮ್ಮ ತಂದೆ-ತಾಯಿಗೆ ತಿಳಿಸುತ್ತೇನೆಂದು ಹೇಳಿದಾಗ, ನಾನು ಮರ್ಯಾದಸ್ಥರ ಕುಟುಂಬದಿಂದ ಬಂದಿದ್ದು, ಈ ವಿಚಾರ ತಿಳಿದರೆ ಗೌರವ ಹೋಗುತ್ತದೆ. ನಾನೆ ಮನೆಯವರನ್ನು ಒಪ್ಪಿಸಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಈಗ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾಳೆ.
ಜೂನ್ನಲ್ಲಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದಲ್ಲಿ ರಾಜಕೀಯ ಮುಖಂಡರು ಮತ್ತು ಇತರೆ ಪ್ರಮುಖರ ಸಮ್ಮಖದಲ್ಲಿ ನ್ಯಾಯ ಪಂಚಾಯಿತಿ ನಡೆಸಿ, ಒಂದು ತಿಂಗಳ ಕಾಲಾವಕಾಶ ಕೊಡಿ, ನಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ ಎಂದು ಹೇಳಿದ ಆತ, ನಂತರ ಆತನ ಸಹೋದರ ಪ್ರವೀಣ್ ಮತ್ತು ಇತರರಿಂದ ದೂರವಾಣಿ ಮೂಲಕ ನನಗೆ ಪ್ರಾಣ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ದೂರಿದರು. ನನಗೆ ಅನ್ಯಾಯವಾಗುತ್ತಿರುವುದನ್ನು ಮತ್ತು ಸಹಾಯಕ್ಕೆ ಯಾರೂ ಬರುತ್ತಿಲ್ಲ. ಜು.23 ರಂದು ಎಸ್ಪಿ ಮತ್ತು ಕೆ.ಆರ್. ನಗರ ಸರ್ಕಲ್ ಇನ್ಸ್ಪೆಕ್ಟರ್ಗೆ ದೂರು ನೀಡಿದೆ. ಪೊಲೀಸರು ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಟ್ಟಿಲ್ಲ. ಈ ಘಟನೆ ಸಂಬಂಧ ರಾಜ್ಯಪಾಲರಿಗೆ ಲಿಖಿತವಾಗಿ ದೂರು ನೀಡಿದ್ದರೂ, ಅವರಿಂದಲೂ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. 24 ಗಂಟೆಯೊಳಗೆ ನನಗೆ ನ್ಯಾಯ ದೊರಕದಿದ್ದಲ್ಲಿ ನಂದೀಶನ ಮನೆ ಮುಂದೆ ಘಟನೆ ಕಾರಣರಾದವರು ಮತ್ತು ಕುಮ್ಮಕ್ಕು ನೀಡಿದವರನ್ನು ಹೊಣೆಗಾರರನ್ನಾಗಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಆಕೆ, ವಿವಿಧ ಮಹಿಳಾ ಸಂಘಟನೆಗಳವರು, ಸಾರ್ವಜನಿಕರು ನನ್ನ ನೆರವಿಗೆ ಬಂದು ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದರು.
ಧರಣಿ ಹಿಂದಕ್ಕೆ
ಸಂಜೆ 5.30ರಲ್ಲಿ ತಹಸೀಲ್ದಾರ್ ಬಿ.ಎನ್. ವೀಣಾಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಎಸ್ಐ ಎಂ.ಆರ್. ಲವ ಅವರು ಧರಣಿ ನಿರತ ಗೌರಮ್ಮನನ್ನು ಭೇಟಿ ಮಾಡಿ, ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿಸ್ಥನ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಆ.28ರೊಳಗೆ ನನಗೆ ನ್ಯಾಯ ದೊರಕದಿದ್ದಲ್ಲಿ ಮತ್ತೆ ಅಮರಣಾಂತ ಉಪವಾಸ ಕೂರುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೊಲೀಸರ ತನಿಖೆ ಸಹಕರಿಸುತ್ತೇನೆ ಎಂದು ಹೇಳಿದಳು.