ಮಕ್ಕಳಿಗೆ ರಾಷ್ಟ್ರಪ್ರೇಮ ಮೂಡಿಸಬೇಕು
ಟಿ. ನರಸೀಪುರ: ಬೆಳೆಯುವ ಮಕ್ಕಳಿಗೆ ವಿದ್ಯಾಭ್ಯಾಸದ ಅವಧಿಯಲ್ಲಿಯೇ ರಾಷ್ಟ್ರ ಪ್ರೇಮ ಎಂಬುದನ್ನು ಮೂಡಿಸಬೇಕು ಎಂದು ಆದರ್ಶ ಕೇಂದ್ರೀಯ ವಿದ್ಯಾಲಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಂ. ನಿಜಗುಣರಾಧ್ಯ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆದರ್ಶ ಕೇಂದ್ರೀಯ ವಿದ್ಯಾಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 67ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆ ಎಂಬುದು ಎಲ್ಲರಿಗೂ ಸಿಕ್ಕಿದಾಗ ಸ್ವಾತಂತ್ರ್ಯ ಎಂಬುದು ಅರ್ಥಪೂರ್ಣವಾಗುತ್ತದೆ. ಬ್ರಿಟಿಷರ ದಾಸ್ಯದಿಂದ ನಮ್ಮನ್ನು ಬಿಡಿಸಲು ಮಹಾತ್ಮ ಗಾಂಧೀಜಿ ಜತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳು ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಎಂದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಾರ್ಯಕ್ರಮಗಳಿಗೆ ಅಗತ್ಯವಿರುವ ಧ್ವನಿವರ್ಧಕ ಖರೀದಿಸಲು ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಪುಟ್ಟಸ್ವಾಮಿ ವೈಯಕ್ತಿಕ ನೆರವು ನೀಡಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಪರಶಿವಮೂರ್ತಿ, ನಿರ್ದೇಶಕ ವೆಂಕಟರಮಣಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಶಿವಪ್ರಕಾಶ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎ.ಶಿವಕುಮಾರ್, ನಿವೃತ್ತ ಶಿಕ್ಷಕ ಡಿ. ಸ್ವಾಮಿನಾಥ್, ಮುಖ್ಯ ಶಿಕ್ಷಕರಾದ ಸೌಭಾಗ್ಯವತಿ, ಎಂ. ಬಸವಣ್ಣ, ನಿವೃತ್ತ ಕಂದಾಯಾಧಿಕಾರಿ ಭೈರಶೆಟ್ಟಿ, ಮುಖಂಡ ನಂಜುಂಡಸ್ವಾಮಿ ಇದ್ದರು.