ಮಹದೇಶ್ವರಸ್ವಾಮಿ ದೇವಸ್ಥಾನದ ಆಲಯ ಪ್ರವೇಶೋತ್ಸವ ಇಂದಿನಿಂದ
ಕ.ಪ್ರ.ವಾರ್ತೆ ಮೈಸೂರು ಆ. 17
ಪುರಾತನ ಪ್ರಸಿದ್ಧ ಮಹದೇಶ್ವರಸ್ವಾಮಿ ದೇವಸ್ಥಾನದ ಆಲಯ ಪ್ರವೇಶ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸೇವಾ ಕಾರ್ಯವು ಆ.18, 19 ಹಾಗೂ 20 ರಂದು ಕುಂಬಾರಕೊಪ್ಪಲಿನಲ್ಲಿ ನಡೆಯಲಿವೆ.
ಕುಂಬಾರಕೊಪ್ಪಲು ಅಭ್ಯುದಯ ಸಂಘದ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಆ.18 ರಂದು ಸಂಜೆ 5ಕ್ಕೆ ಆಲಯ ಪ್ರವೇಶ, ಗಣಪತಿ ಹೋಮ, ನವಗ್ರಹ ಹೋಮ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19 ರಂದು ಬೆಳಗ್ಗೆ 5ಕ್ಕೆ ಗೋಪುರ ಕಳಸ ಸ್ಥಾಪನೆ, 10ಕ್ಕೆ ದೇವಸ್ಥಾನ ಹಾಗೂ ಮಹಾದ್ವಾರದ ಉದ್ಘಾಟನೆ ಹಾಗೂ ರಾತ್ರಿ ಹುಲಿವಾಹನೋತ್ಸವವಿದೆ ಎಂದರು.
ಶಿಬಿರ: 20 ರಂದು ಬೆಳಗ್ಗೆ 9ಕ್ಕೆ ಮೈಸೂರು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಹಾಗೂ ಬಿಜಿಎಸ್ ಅಪೊಲೋ ಆಸ್ಪತ್ರೆ ಸಂಯುಕ್ತಾಶ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ.
ಹೃದ್ರೋಗ, ಕ್ಷಯರೋಗ, ಅಸ್ತಮಾ, ಉಬ್ಬುಸ, ಕಾಲುನೋವು, ಮಾನಸಿಕ ಒತ್ತಡ, ಕಣ್ಣಿನಪೊರೆ, ಮೂತ್ರ ಜನಾಂಗದಲ್ಲಿನ ಕಲ್ಲು, ಪಾರ್ಶ್ವವಾಯು, ದಂತಕ್ಷಯ ಹಾಗೂ ಮಹಿಳೆಯರಿಗೆ ಸಂಬಂಧಿಸಿದಂತೆ ಬಿಳಿಸೆರಗು, ಬಂಜೆತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಕ್ಕಳ ಕಾಯಿಲೆ ಮತ್ತಿತರ ಸಮಸ್ಯೆಗಳಿಗೆ ತಪಾಸಣೆ ನಡೆಯಲಿದೆ. ಸುಮಾರು 200 ಮಂದಿ ವೈದ್ಯರು ಭಾಗವಹಿಸಲಿದ್ದು, 10 ಸಾವಿರ ಮಂದಿ ಇದರ ಪ್ರಯೋಜನ ಪಡೆಯಬಹುದಾಗಿದೆ.
ದೇವಸ್ಥಾನದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾದಯ್ಯನ ಗಿರಿ ಹಾಗೂ ಚಿತ್ರಕಲಾ ಸಂಗ್ರಹಾಲಯಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಗುದ್ದಲಿ ಪೂಜೆ ನೆರವೇರಿಸುವರು.
ನಂತರ ಮಧ್ಯಾಹ್ನ 1ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ನಿರ್ಮಲಾನಂದನಾಥ ಶ್ರೀಗಳು ಸಾನ್ನಿಧ್ಯ ವಹಿಸುವರು. ಶಾಖಾ ಮಠದ ಸೋಮನಾಥ ಸ್ವಾಮೀಜಿ, ಸಂಸದ ಎಚ್. ವಿಶ್ವನಾಥ್, ಶಾಸಕರಾದ ವಾಸು, ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್, ಸಿ.ಎಚ್. ವಿಜಯಶಂಕರ್ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸುವರು. ಸಂಜೆ 4ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಿದೆ ಎಂದರು.