ಚುನಾವಣೆ ಕಾರಣ ಆದವರಿಗೆ ದಂಡ ವಿಧಿಸಿ
ಕ.ಪ್ರ.ವಾರ್ತೆ , ಮೈಸೂರು , ಆ. 18
ಸಕಾರಣವಿಲ್ಲದೆ ಚುನಾಯಿತ ಸ್ಥಾನಕ್ಕೆ ರಾಜಿನಾಮೆ ನೀಡಿ ಉಪಚುನಾವಣೆ ತಂದೊಡ್ಡುವ ಜನಪ್ರತಿನಿಧಿಗಳಿಗೆ ದಂಡ ವಿಧಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಜನರ ತೆರಿಗೆ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡಲು ಕಾರಣಕರ್ತರಾದ ಜನಪ್ರತಿನಿಧಿಗಳಿಂದ ಉಪಚುನಾವಣೆಗೆ ತಗಲುವ ವೆಚ್ಚವನ್ನೂ ಭರಿಸುವಂತೆ ಸೂಚಿಸಬೇಕು. ದಂಡದ ಹಣ ನೀಡದವರಿಗೆ ಮುಂದಿನ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಬೇಕು. ಕಳೆದ ಐದಾರು ವರ್ಷಗಳಲ್ಲಿ ಆಪರೇಷನ್ ಕಮಲ, ವಿಧಾನಸಭೆಯಿಂದ ಸಂಸತ್ತಿಗೆ ಜಿಗಿದಾಡುವ ಪ್ರಕ್ರಿಯೆಗಳಿಂದ 20ಕ್ಕೂ ಹೆಚ್ಚು ಉಪಚುನಾವಣೆಗಳು ನಡೆದಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಿಂದ ಮೂರು ಜಿಲ್ಲೆಗಳಲ್ಲಿ ನೀತಿ ಸಂಹಿತೆ ಅಡ್ಡಿ ಇದೆ. ಇದರಿಂದ ಇನ್ನಿತರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಮೈಸೂರಿನ ಕೆ.ಆರ್. ನಗರ ತಾಲೂಕಿಗೆ ಚುನಾವಣೆ ಇದ್ದುದ್ದರಿಂದ ಇಡೀ ಜಿಲ್ಲೆಗೆ ನೀತಿ ಸಂಹಿತೆ ಅನ್ವಯವಾಗುತ್ತಿರುವುದು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಚುನಾಯಿತ ಪ್ರತಿನಿಧಿ ರಾಜಿನಾಮೆ ನೀಡಿದ ಕ್ಷೇತ್ರಗಳಿಗೆ ವಿಧಾನಸಭೆಯ ಬಹುಮತ ಸದಸ್ಯರ ಅಭಿಪ್ರಾಯ ಪಡೆದು ರಾಜ್ಯಪಾಲರೇ ಅಭ್ಯರ್ಥಿಯನ್ನು ನಾಮಕರಣ ಮಾಡುವಂತೆ ತಿದ್ದುಪಡಿ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷಗಳಿಗೆ ಆರ್ಟಿಐ ಭಯ ಏಕೆ: ರಾಜಕೀಯ ಪಕ್ಷಗಳು ಆರ್ಟಿಐ ಕಾಯಿದೆಯಿಂದ ಹೊರಬರಲು ಕಾನೂನು ತಿದ್ದುಪಡಿಗೆ ಮುಂದಾಗಿರುವುದು ಜನತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದಂತಾಗಿದೆ. ದೇಶವನ್ನು ಆಳುವ ರಾಜಕೀಯ ಪಕ್ಷಗಳಿಗೆ ಪಾರದರ್ಶಕತೆಯ ಆಡಳಿತ ಬೇಕಿಲ್ಲವೆಂಬ ವಿನಾಯಿತಿ ಪಡೆಯುವ ರಾಜಕೀಯ ಪಕ್ಷಗಳಿಗೆ ಆರ್ಟಿಐ ಕಾಯಿದೆಯ ಭಯವೇಕೆ ಎಂದು ಪ್ರಶ್ನಿಸಿದರು.
ರಾಜ್ಯಾದ್ಯಂತ ಇರುವ ಐದು ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳನ್ನು ನಾಶ ಮಾಡಲು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್ಗಳಿಗೆ ಆದೇಶ ನೀಡಿರುವ ಕ್ರಮ, ಏಳಿಗೆಗಾಗಿ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಖ್ಯವಾಗಿರುವ ಕಬ್ಬು ಅಭಿವೃದ್ಧಿ ಆಯುಕ್ತರ ಸ್ಥಾನ 2 ತಿಂಗಳಿಂದ ಖಾಲಿ ಇದೆ. ಕೂಡಲೇ ಈ ಸ್ಥಾನ ಭರ್ತಿ ಮಾಡಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣ ಕೂಡಲೇ ಕೊಡಿಸುವಂತೆ ಅವರು ಮನವಿ ಮಾಡಿದರು.