ಪೊಲೀಸರಿಗೆ ಸಾರ್ವಜನಿಕರ ಮೌಖಿಕ ದೂರು ಹಲವು
ಕ.ಪ್ರ.ವಾರ್ತೆ , ಮೈಸೂರು , ಆ. 18
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾನುವಾರ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಮೌಖಿಕ ದೂರುಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಲಿಸಿದರು. ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆದ ಈ ಸಭೆಯಲ್ಲಿ ಹಿರಿಯ ನಾಗರಿಕರು ಹೆಚ್ಚಾಗಿ ಪಾಲ್ಗೊಂಡಿದ್ದರು. ಬಡಾವಣೆಗಳಲ್ಲಿ ಪುಂಡರ ಹಾವಳಿ ತಪ್ಪಿಸುವಂತೆ ಹಲವರು ಕೋರಿಕೊಂಡರು. ರಾತ್ರಿವೇಳೆ ಪೊಲೀಸರ ಗಸ್ತು ಹೆಚ್ಚಾಗಲಿ. ಸರ ಅಪಹರಣ, ಕನ್ನಾ ಕಳವಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಸಲಹೆ ನೀಡಿದರು. ಅಲ್ಲದೆ, ಹಲವರು ತಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪೊಲೀಸರ ಮುಂದಿಟ್ಟರು.
ದೇವರಾಜ, ಲಷ್ಕರ್, ನಜರ್ಬಾದ್, ಉದಯಗಿರಿ, ನರಸಿಂಹರಾಜ, ಮಂಡಿ, ವಿವಿ ಪುರಂ, ಮೇಟಗಳ್ಳಿ, ಜಯಲಕ್ಷ್ಮಿಪುರಂ, ವಿಜಯನಗರ, ಕೃಷ್ಣರಾಜ, ಲಕ್ಷ್ಮಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ ಮತ್ತು ಕುವೆಂಪುನಗರ ಠಾಣೆಗಳಲ್ಲಿ ಕುಂದುಕೊರತೆ ಸಭೆ ನಡೆಯಿತು.