ಪ್ರೊ.ಎಂ. ರಾಮರಾವ್ ಜೀವನ ಕ್ರಮ ಅನುಕರಣೀಯ
ಕ.ಪ್ರ.ವಾರ್ತೆ , ಮೈಸೂರು , ಆ. 18
ಆದರ್ಶ ಅಧ್ಯಾಪಕ ಪ್ರೊ.ರಾಮರಾವ್ ಅವರ ಜೀವನ ಕ್ರಮ ಅನುಕರಣೀಯ ಎಂದು ಮಾನಸಗಂಗೋತ್ರಿಯ ಇಂಗ್ಲಿಷ್ ವಿಭಾಗದ ನಿವೃತ್ತ ಅಧ್ಯಕ್ಷ ಪ್ರೊ.ಡಿ.ಎ.ಶಂಕರ್ ಹೇಳಿದರು.
ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಇಂಗ್ಲಿಷ್ ವಿಭಾಗದ ಅಧ್ಯಾಪಕ ಹಾಗೂ ಇಂಗ್ಲಿಷ್- ಕನ್ನಡ ನಿಘಂಟಿನ ಪ್ರಧಾನ ಸಂಪಾದಕರೂ ಆಗಿದ್ದ ದಿವಂಗತ ಪ್ರೊ.ಎಂ. ರಾಮರಾವ್ ಅವರ ಸ್ಮರಣಾರ್ಥ ಕುಟುಂಬದ ಸದಸ್ಯರು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಂ. ರಾಮರಾವ್ ನೂರರ ನೆನಪು ಸಂಸ್ಮರಣ ಗ್ರಂಥ ಕುರಿತು ಅವರು ಮಾತನಾಡಿದರು.
ಕಾಲಧರ್ಮದಲ್ಲಿ ಆಗಾಗ್ಗೆ ನಡವಳಿಕೆಗಳು ಬದಲಾಗುತ್ತವೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಪ್ರೊ.ರಾಮರಾವ್ ಅವರು, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ತಮಗೆ ಎಷ್ಟೇ ನೋವಾಗಿದ್ದರೂ ವಿದ್ಯಾರ್ಥಿಗಳೊಂದಿಗೆ ಹೊಂದಿದ್ದ ಒಡನಾಟ ಅನುಕರಣೀಯ ಎಂದರು.
ಇದಕ್ಕೆ ವಿಮರ್ಶೆ ಬೇಕಿಲ್ಲ: ಪ್ರೊ.ರಾಮರಾವ್ ಅವರನ್ನು ಕುರಿತಾಗಿ ಹೊರತಂದಿರುವ ಈ ಕೃತಿ ಅಭಿನಂದನಾ ಗ್ರಂಥವಲ್ಲ. ಇದೊಂದು ಸಂಸ್ಮರಣ ಗ್ರಂಥ. ಹಾಗಾಗಿ ಇದಕ್ಕೆ ವಿಮರ್ಶೆ ಅಗತ್ಯವಿಲ್ಲ. ಇದನ್ನು ಗೌರವ ಪೂರ್ವಕವಾಗಿ ಬರೆಯಲಾಗಿದೆ. ಇಂತಹ ಕೃತಿಗಳಿಂದ ಆಗಿನ ಇತಿಹಾಸ ಹಾಗೂ ವ್ಯಕ್ತಿತ್ವದ ಮಹತ್ವ ತಿಳಿಯಬಹುದಾಗಿದೆ. ಈ ಕೃತಿಯಲ್ಲಿ ರಾವರಾವ್ ಅವರ ಜೀವನ ಅನಾವರಣಗೊಂಡಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಮೈಸೂರು ವಿವಿಯ ಅಭಿವೃದ್ಧಿ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ವಿ.ಕೆ. ನಟರಾಜ್ ಮಾತನಾಡಿ ಗುರುವಿನ ಬಗ್ಗೆ ಅನುಭವ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಅಂತಾರಾಷ್ಟ್ರೀಯ ಸರೋದ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಸಂಸ್ಮರಣ ಗ್ರಂಥ ಲೋರ್ಕಾಪಣೆಗೊಳಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಮುಖ್ಯ ಅತಿಥಿಯಾಗಿದ್ದರು. ಪ್ರೊ.ಎಂ. ರಾಮರಾವ್ ಅವರ ಸಾಹಿತ್ಯ ಒಂದು ಇಣುಕು ನೋಟ ಎಂಬ ವಿಷಯ ಕುರಿತು ಲೇಖಕರಾದ ಪ್ರೊ.ಎಚ್.ಎಸ್. ಉಮೇಶ್, ಡಾ.ಸಿ.ವಿ. ಗಿರಿಧರ್, ಡಾ.ಎನ್.ಎಂ. ಗಾಯತ್ರಿ, ರವಿಕುಮಾರ್ ಕುಂಬಾರ್, ಬಿ. ಸುಜಾತ ಮಾತನಾಡಿದರು.