ವಕೀಲರ ಸಂಘದ ಅಧ್ಯಕ್ಷರಾಗಿ ಮಹೇಶ್ ಆಯ್ಕೆ
ಕ.ಪ್ರ.ವಾರ್ತೆ , ನಂಜನಗೂಡು , ಆ. 18
ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎ.ಬಿ. ಮಹೇಶ್‌ಬಾಬು ಆಯ್ಕೆಯಾದರು.
ಭಾನುವಾರ ನಡೆದ ಚುನಾವಣೆಯಲ್ಲಿ 44 ಮತಗಳನ್ನು ಪಡೆದ ಮಹೇಶ್ ಬಾಬು ತಮ್ಮ ಪ್ರತಿಸ್ಪರ್ಧಿ ಎನ್. ಶ್ರೀಕಂಠಪ್ರಸಾದ್ ಅವರನ್ನು ಕೇವಲ 2 ಮತಗಳ ಅಂತರದಿಂದ ಪರಾಭವಗೊಳಿಸಿದರು. ಪ್ರಾರಂಭದಲ್ಲಿ ಗೆಲುವಿನ ಹಾದಿಯಲ್ಲಿದ್ದ ಎನ್‌ಎಸ್‌ಪಿ ಅಂತಿಮವಾಗಿ 42 ಮತ ಗಳಿಸಿದರು. ಕಾರ್ಯದರ್ಶಿ ಎಸ್. ಸೋಹನ್ ಕುಮಾರ್ 66 ಮತಗಳನ್ನು ಹಾಗೂ ಸಹಕಾರ್ಯದರ್ಶಿ ಕೆಂಪರಾಜ್ 56 ಮತಗಳನ್ನು ಪಡೆದು ಆಯ್ಕೆಗೊಂಡಿರುವುದಾಗಿ ಚುನಾವಣಾಧಿಕಾರಿ, ವಕೀಲ ಬಸವಟ್ಟಿಗೆ ಕುಮಾರ್ ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಕಾಣಿಸಿಕೊಂಡಿತು. ಕಣದಲ್ಲಿದ್ದ ಉಳಿದ ಮೂವರು ಅಭ್ಯರ್ಥಿಗಳಾದ ಹೆಡಿಯಾಲ ಎಂ.ಮಹೇಶ್ 32, ಟಿ.ಶ್ರೀಕಂಠ 2, ಮತ್ತು ಎಂ.ಶ್ರೀಕಂಠ 3 ಮತಗಳನ್ನು ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡ ಉಳಿದ ಇಬ್ಬರು ಅಭ್ಯರ್ಥಿಗಳಾದ ಎಲ್. ಮಹದೇವು 53, ಎಂ. ಶ್ರೀಕಂಠ 2 ಮತ ತಮ್ಮದಾಗಿಸಿಕೊಂಡರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಗುಂಡರೆಡ್ಡಿ 39, ಎಂ. ಶ್ರೀನಿವಾಸ್ 26 ಮತಗಳನ್ನು ಪಡೆದರು.
ಫಲಿತಾಂಶದ ಲೆಕ್ಕಾಚಾರವೇ ಬೇರೆಯಾಗಿತ್ತು. ಶನಿವಾರ ರಾತ್ರಿ ನಡೆದ ಔತಣಕೂಟ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿತು ಎಂದು ಎನ್‌ಎಸ್‌ಪಿ ಬೆಂಬಲಿಗ ಹಿರಿಯ ವಕೀಲರೊಬ್ಬರು ಹೇಳಿದರು. ಸೋಲನ್ನೂ ಉತ್ಸಾಹದಿಂದಲೇ ಸ್ವೀಕರಿಸಿರುವುದಾಗಿ ಹೇಳಿದ ಎನ್‌ಎಸ್‌ಪಿ, ನೂತನ ಕಾರ್ಯಕಾರಿ ಮಂಡಳಿಗೆ ಎಲ್ಲ ರೀತಿಯ ಸಲಹೆ, ಸಹಕಾರ ನೀಡುವುದಾಗಿ ಹೇಳಿದರು.
ವಕೀಲರ ಭವನ: ಸುದ್ದಿಗಾರರ ಜತೆ ಮಾತನಾಡಿದ ಮಹೇಶ್‌ಬಾಬು, ವಕೀಲರ ಶ್ರೇಯೋಭಿವೃದ್ಧಿ ಹಾಗೂ ವಕೀಲರ ಭವನ ನಿರ್ಮಾಣಕ್ಕೆ ಶ್ರಮಿಸುವುದಾಗಿ ತಿಳಿಸಿದರು. ಆಯ್ಕೆಗೆ ಕಾರಣರಾದ ಹಿರಿಯ ಹಾಗೂ ಕಿರಿಯ ವಕೀಲರಿಗೆ ಕೃತಜ್ಞತೆ ಸಲ್ಲಿಸಿದರು.
ವಕೀಲರಾದ ಕೆ.ಬಿ. ಜಯದೇವಪ್ಪ, ಎಂ.ಜೆ. ಸೇತೂರಾವ್, ಎಸ್.ಬಿ. ಕಂಚಂದ್, ಕೆ.ತಾರಕರಾಮನ್, ಎಸ್. ಕುಮಾರ್, ಎಸ್.ರಾಚಪ್ಪ, ಬಿ.ನಂಜುಂಡಸ್ವಾಮಿ, ಆರ್.ಎಂ. ಸಿದ್ದರಾಜು, ಹೆಡಿಯಾಲ ಮಹೇಶ್, ಕೆ. ವೃಷಭೇಂದ್ರಪ್ರಸಾದ್, ಟಿ. ಗಣೇಶಮೂರ್ತಿ, ಟಿ. ಮುರುಳಿಧರ್, ಮಹೇಶ್ ಅತ್ತಿಖಾನೆ, ಅಶ್ವಿನಿ, ಸವಿತ, ಸುಧಾಮಣಿ, ಎ.ಎಸ್. ವಸಂತಲಕ್ಷ್ಮಿ ಇದ್ದರು.