ಚುನಾವಣೆ ನಂತರ ಕೃಷ್ಣಾವತಾರ ಬಯಲು
ಕ.ಪ್ರ.ವಾರ್ತೆ , ಭೇರ್ಯ , ಆ. 19
ಎಸ್.ಎಂ. ಕೃಷ್ಣ ಏನು ಮಹಾಭಾರತದ ಶ್ರಿಕೃಷ್ಣ ಅಲ್ಲ. ಅವರ ಹತ್ತಿರ ಯಾವುದೆ ಸುದರ್ಶನ ಚಕ್ರವೂ ಇಲ್ಲ. ಚುನಾವಣೆ ಕಳೆದ ಮೇಲೆ ಎಸ್.ಎಂ. ಕೃಷ್ಣನ ಅವತಾರ ಏನು ಎಂಬುದು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗುಡುಗಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಸೋಮವಾರ ರೋಡ್ ಶೋ ನಡೆಸಿ, ಮಂಡ್ಯ ಲೋಕಸಭಾ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಧರ್ಮಸಿಂಗ್ ಸರ್ಕಾರದಲ್ಲಿ ಇವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆದರೆ ಕರ್ನಾಟಕಕ್ಕೆ 10 ಬಾರಿ ಏಕೆ ಬಂದರು ಎಂಬುದು ನನಗೆ ತಿಳಿದಿದೆ. ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯ ನನ್ನನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಎಲ್ಲ ಕಡೆ ಹೇಳಿಕೊಂಡು ಬರುತ್ತಿದ್ದು, 1994 ರಲ್ಲಿ ನಾನು ಮುಖ್ಯಮಂತ್ರಿಯಾದೆ. ಉಪಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲರನ್ನು ಮಾಡಲಾಯಿತು. ತದನಂತರ ನನ್ನ ಸಮಕಾಲೀನದವರಾದ ದಿ.ಜೆ.ಎಚ್. ಪಟೇಲರನ್ನು ಮುಖ್ಯಮಂತ್ರಿ ಮಾಡಲಾಯಿತು. ನಂತರ 2004ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ದೆಹಲಿಗೆ 5 ಬಾರಿ ಹೋಗಿ ಬಂದೆ. ಕ್ರೈಸ್ತ ಸಮಾಜದ ಸೋನಿಯಾ ಗಾಂಧಿ ಅವರನ್ನು ಕೇಳಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.
ಸಿದ್ದರಾಮಯ್ಯ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ದಾಖಲೆಗಳಿವೆ ಚುನಾವಣೆ ಕಳೆದ ಬಳಿಕ ದೇವೇಗೌಡ ಎಲ್ಲಾದಕ್ಕೂ ಉತ್ತರ ಕೊಡುತ್ತಾನೆ ಎಂದರು.
ಶಾಸಕ ಸಾ.ರಾ. ಮಹೇಶ್, ಮಾಜಿ ಸಂಸದ ಚೆಲುವರಾಯಸ್ವಾಮಿ, ಅಭ್ಯರ್ಥಿ ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಂಠೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಜೆಡಿಎಸ್ ಮುಖಂಡ ಹೊಸಹಳ್ಳಿ ವೆಂಕಟೇಶ್, ಜಿಪಂ ಸದಸ್ಯ ದ್ವಾರಕೀಶ್ ಇದ್ದರು.