ಬಿಜೆಪಿ ಜತೆ ಒಳ ಒಪ್ಪಂದ ಇಲ್ಲ: ದೇವೇಗೌಡ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಆ. 19
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಇಲ್ಲದಿರುವ ಕಾರಣ ಅಭ್ಯರ್ಥಿಗಳನ್ನು ಹಾಕಿಲ್ಲ. ಇದನ್ನೇ ಜೆಡಿಎಸ್ ಜತೆಗಿನ ಒಳಒಪ್ಪಂದ ಎಂದು ಕಾಂಗ್ರೆಸ್‌ನವರು ಅಪ ಪ್ರಚಾರ ಮಾಡುತ್ತಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಿಡಿಕಾರಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿತ್ತು. ಆದ್ದರಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಈಗಲೂ ಪಕ್ಷ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ವಿರುದ್ಧ ರಾಷ್ಟ್ರೀಯ ಪಕ್ಷವೆಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದ ಅವರು, ಅದು ಯಾವ ರೀತಿಯ ಒಪ್ಪಂದ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಜಾತಿ ರಾಜಕಾರಣ ಮಾಡಿ ಜಾತಿ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ಇದರ ಪರಿಣಾಮವನ್ನು ಮುಂದೆ ಅವರು ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ ಅವರು, ಚುನಾವಣೆಯ ನಂತರ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಮತ್ತು ಮಾಡಿರುವ ಆರೋಪಗಳನ್ನು ಜನರೆದುರು ಬಿಚ್ಚಿಡುತ್ತೇನೆ ಎಂದು ಗುಡುಗಿದರು.
ಸಿದ್ದರಾಮಯ್ಯಗೆ ಜ್ಞಾಪಕವಿಲ್ಲವೆ?: ದೇವೇಗೌಡ ಮತ್ತವರ ಮಕ್ಕಳು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು, ಇವರು ಕುರುಬ ಸಮಾಜದ ವಿರೋಧಿಗಳು ಎಂದು ರಾಜ್ಯಾದ್ಯಂತ ಹೇಳಿಕೊಂಡು ತಿರುಗುತ್ತಿರುವ ಸಿದ್ದರಾಮಯ್ಯ ಅವರಿಗೆ, ನಾನು ಸೋನಿಯಾಗಾಂಧಿ ಮನೆ ಮುಂದೆ ಐದು ಬಾರಿ ಹೋಗಿದ್ದು, ಅವರು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡದಿದ್ದು, ಜ್ಞಾಪಕವಿಲ್ಲವೇ ಎಂದು ಛೇಡಿಸಿದರು.
ನನ್ನನ್ನು ಕುರುಬ ಸಮಾಜದ ವಿರೋಧಿ ಎಂದು ಅಪಪ್ರಚಾರ ಮಾಡುವವರಿಗೆ ಹಿಂದೆ ಕುರುಬ ಸಮಾಜದ ಮಂಚನಹಳ್ಳಿ ಮಹದೇವ್ ಅವರನ್ನು ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿದ್ದು ನೆನಪಿಲ್ಲವೆ ಎಂದರಲ್ಲದೆ, ನನ್ನ ಬಗ್ಗೆ ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಹಗುರವಾಗಿ ಮಾತನಾಡುತ್ತಿದ್ದಾರೆ, ಹಿಂದಿನ ನನ್ನ ಸಹಾಯ ಇಷ್ಟು ಬೇಗ ಮರೆತುಹೋಯಿತೆ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಸಿ.ಎಸ್. ಪುಟ್ಟರಾಜು, ಶಾಸಕರಾದ ಎನ್. ಚಲುವರಾಯಸ್ವಾಮಿ, ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಾ.ರಾ. ಮಹೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯೆ ಕಲ್ಪನಾ ಧನಂಜಯ, ಮಾಜಿ ಸದಸ್ಯ ಎಂ.ಟಿ. ಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಪುರಸಭಾ ಸದಸ್ಯ ಉಮೇಶ್, ರಾಜು, ಹೊಸಳ್ಳಿ ವೆಂಕಟೇಶ್, ವಕ್ತಾರ ಕೆ.ಎಲ್. ರಮೇಶ್, ಪುರಸಭಾ ಮಾಜಿ ಅಧ್ಯಕ್ಷ ವೈ.ಆರ್. ಪ್ರಕಾಶ್ ಇದ್ದರು.