ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೇಲ್ಮನೆ ಉಪ ಚುನಾವಣೆ: ಎಲ್ಲ ಪಕ್ಷಗಳಿಂದ ಅಂತಿಮ ಕಸರತ್ತು

Vishwanath S
Updated On : 20 Aug 2013, 12:21 pm

ಕ.ಪ್ರ.ವಾರ್ತೆ ,  ಟಿ.ನರಸೀಪುರ ,  ಆ. 19
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಿದ್ದನ್ನು ಸ್ಮರಿಸಿಕೊಂಡು ಈ ಉಪಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪಕ್ಷದ ರಾಜ್ಯ ಉಪಾಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ಮನವಿ ಮಾಡಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿ ಸೋಮವಾರ ಭೈರಾಪುರ ಗ್ರಾಪಂ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮಸೂದೆಯನ್ನೇ ಜಾರಿಗೆ ತರುತ್ತಿದ್ದರು ಎಂದರು. ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಸಕ್ರಿಯ ರಾಜಕಾರಣವನ್ನು ಮುಂದುವರಿಸುತ್ತೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲನ್ನು ನಿರೀಕ್ಷಿಸಿರಲಿಲ್ಲ. 'ಸೋಲೇ ಗೆಲುವಿನ ಮೆಟ್ಟಿಲು' ಎಂಬುದರ ಅರಿವಿದೆ. ಗೆದ್ದರೆ ವಿಧಾನಸಭೆ, ಸೋತರೆ ಕ್ಷೇತ್ರದಲ್ಲಿ ಜನಸೇವೆ ಎಂದು ಹೇಳಿದಂತೆ ರಾಜಕೀಯ ಸಂಘಟನೆ ಹಾಗೂ ಸೇವಾ ಕಾರ್ಯಗಳೆರಡನ್ನೂ ಒಟ್ಟಿಗೆ ಮಾಡುತ್ತೇನೆ ಎಂದರು.
 ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಬಿ. ವೀರಭದ್ರಪ್ಪ, ಆಲಗೂಡು ಗ್ರಾ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಎಂ. ಮಿಥುನ್, ಎ.ಎನ್. ರಂಗುನಾಯ್ಕ, ನಿವೃತ್ತ ಅರಣ್ಯಾಧಿಕಾರಿ ಪಿ. ಶಿವಸ್ವಾಮಿ ಇದ್ದರು.

ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ: ಎಸ್. ಶಂಕರ್
ಟಿ. ನರಸೀಪುರ: ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯದಂತೆ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಲು ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ವಕ್ತಾರ ಎಸ್. ಶಂಕರ್ ಮನವಿ ಮಾಡಿದರು. ಪಟ್ಟಣದ ಭೈರಾಪುರದಲ್ಲಿ ಸೋಮವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಇತಿಹಾಸವನ್ನು ಅವಲೋಕಿಸಿದಾಗ ಬಲಯುತ ಸಮುದಾಯದಲ್ಲದವರೇ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇಂಥ ಅವಕಾಶ ಜೆಡಿಎಸ್, ಬಿಜೆಪಿ ಮತ್ಯಾವುದೇ ಪಕ್ಷದಲ್ಲಿಯೂ ಇಲ್ಲ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಪರಸ್ಪರ ಕಿತ್ತಾಡುತ್ತಿದ್ದ ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್ ನಾಯಕರು ಲೋಕಸಭೆ ಹಾಗೂ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿ ಮುಖಂಡರಿಂದ ಶೇಖರ್ ಪರ ಮತಯಾಚನೆ
ಟಿ. ನರಸೀಪುರ: ಪಟ್ಟಣದ ಹೊಸ ತಿರುಮಕೂಡಲಿನಲ್ಲಿ ಬಿಜೆಪಿ ಮುಖಂಡರು ಪಾದಯಾತ್ರೆ ನಡೆಸಿ, ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಕೆಜೆಪಿ ಅಭ್ಯರ್ಥಿಯು.ಎಸ್. ಶೇಖರ್ ಅವರ ಪರ ಮತಯಾಚಿಸಿದರು.ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಹೊಸ ತಿರುಮಕೂಡಲಿನಲ್ಲಿ ಬಿಜೆಪಿ ಮುಖಂಡರ ದಂಡು ವರಿಷ್ಠರ ಸೂಚನೆಯಂತೆ ಕೆಜೆಪಿ ಬೆಂಬಲಿಸಿ, ಅಭ್ಯರ್ಥಿಯ ಪರ ಮತಯಾಚನೆಯಲ್ಲಿ ನಿರತರಾಗಿದ್ದರು. ಭೈರಾಪುರ ಗ್ರಾಪಂ ಸದಸ್ಯರ ಮನೆಗಳಿಗೆ ತೆರಳಿ ಕೆಜೆಪಿಗೆ ಮತವನ್ನು ನೀಡುವಂತೆ ಸ್ಥಳೀಯ ಚುನಾಯಿತ ಮತದಾರರ ಮನವೊಲಿಸಿದರು.ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ, ವರುಣ ಕ್ಷೇತ್ರಾಧ್ಯಕ್ಷರಾದ ತೊರವಳ್ಳಿ ಶಿವನಂಜಪ್ಪ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಮತ್ತಿತರರು ಇದ್ದರು.

ನಮ್ಮ ಸರ್ಕಾರದ ಸಾಧನೆ ನೋಡಿ ಮತ ನೀಡಿ: ರೇವಣ್ಣ
ಸಾಲಿಗ್ರಾಮ:
ನಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ಮನಗಂಡು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಮನವಿ ಮಾಡಿದರು.ಸಾಲಿಗ್ರಾಮ ಪಟ್ಟಣದ ಮುಖ್ಯರಸ್ತೆಗಳಲ್ಲಿ ಭಾನುವಾರ ಸಂಜೆ ರೋಡ್ ಶೋ ನಡೆಸಿ ನಂತರ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇದನ್ನು ಮನಗಂಡು ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿ ಪುಟ್ಟರಾಜುಗೆ ಮತ ನೀಡಿ ಗೆಲ್ಲಿಸುವಂತೆ ಕೋರಿದರು.
ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಅಭ್ಯರ್ಥಿ ಪುಟ್ಟರಾಜು, ಹೊಸಹಳ್ಳಿ ವೆಂಕಟೇಶ್ ತೆರೆದ ವಾಹನದಲ್ಲಿ ತೆರಳಿ ಮತಯಾಚಿಸಿದರು. ಮುಖಂಡರಾದ ಎಸ್.ಕೆ. ಮಧುಚಂದ್ರ, ಎಸ್.ಎಸ್. ರಾಮಕೃಷ್ಣೇಗೌಡ, ಎ.ಟಿ. ಸೋಮಶೇಖರ್, ರವಿ, ಸಿ.ಹಳ್ಳಿ ಹರೀಶ್, ಚೇತನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement