ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿದ್ದು ಸರ್ಕಾರಕ್ಕೆ ನೂರು, ಕದನ ಮೂರು

Vishwanath S
Updated On : 20 Aug 2013, 12:20 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 19
ಡಿ. ದೇವರಾಜ ಅರಸು ಅವರ ನಂತರ ಅಂದರೆ 33 ವರ್ಷಗಳ ನಂತರ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಅವರ ಮೂಲಕ ಒಲಿದಿದ್ದು, ಅವರ ಸರ್ಕಾರಕ್ಕೆ ಮಂಗಳವಾರ (ಆ.20) 100 ದಿನಗಳು ತುಂಬುತ್ತಿವೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಚುನಾವಣೆಗಳು ಎದುರಾಗಿರುವುದು ವಿಶೇಷ.
ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರ ನಿಧನದಿಂದ ವಿಳಂಬವಾಗಿ ನಡೆದ ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆ, ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಉಪ ಚುನಾವಣೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರವೂ ಸೇರುತ್ತದೆ. ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಏಳು ಬಾರಿ ಮೈಸೂರಿಗೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ರಾಜ್ಯಪಾಲರಿಂದ ಸರ್ಕಾರ ರಚನೆಗೆ ಪತ್ರ ಪಡೆದ ನಂತರ ಮೇ 11ರಂದು ರಾತ್ರಿ 9.05ಕ್ಕೆ ಮೈಸೂರಿಗೆ ಆಗಮಿಸಿ, ರಾಮಕೃಷ್ಣ ನಗರದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬೆಂಗಳೂರು ರಸ್ತೆಯ ಟೋಲ್‌ಗೇಟ್ ಬಳಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮರುದಿನ ಅಂದರೆ ಮೇ 12ರಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ನಂತರ ಸಾಹಿತಿ ದೇವನೂರ ಮಹಾದೇವ ಅವರ ಮನೆಗೆ ಭೇಟಿ ನೀಡಿ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದರು. ಮೇ 17 ರಂದು ತಮ್ಮ ಬಾಲ್ಯ ಸ್ನೇಹಿತ ಹಾಲಿನ ರಾಮಣ್ಣ ಅವರ ನಿಧನದ ಸುದ್ದಿ ತಿಳಿದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿ ಅದೇ ದಿನ ವಾಪಸ್ ಆದರು.
ಮೇ 19ರಂದು ರಾತ್ರಿ ರಸ್ತೆ ಮೂಲಕ ಆಗಮಿಸಿ ರಾಮಕೃಷ್ಣ ನಗರದ ಮನೆಯಲ್ಲಿ ವಾಸ್ತವ್ಯ ಹೂಡಿ ಮೇ 20 ರಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು. ನಂತರ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತೆರಳಿ ನಗರಕ್ಕೆ ವಾಪಸ್ ಆದರು. ಮೇ 21ರಂದು ನಗರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ರಾಜೀವ್ ಗಾಂಧಿ ಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತೆ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ಆದರು.
ಮೇ 25ರಂದು ಮಧ್ಯಾಹ್ನ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಡೆಂಘೀ ಜ್ವರದಿಂದ ನಾಲ್ವರು ಮಕ್ಕಳು ಬಲಿಯಾದ ಮೈಸೂರು ತಾಲೂಕು ಸಾಲುಂಡಿಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದರು. ಹುಣಸೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ಪಿರಿಯಾಪಟ್ಟಣ ಕ್ಷೇತ್ರದ ಪ್ರಚಾರದಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸಾದರು. ಜೂ.6ರಂದು ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಲೈಲಾಮಾ ಅವರ ಜನ್ಮದಿನಾಚರಣೆ ನಂತರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಡಿವೈಎಸ್ಪಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ರಸ್ತೆ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದರು.
ಆ.3ರಂದು ರಸ್ತೆ ಮೂಲಕ ಮೈಸೂರಿಗೆ ಆಗಮಿಸಿ ನಟಿ ರಮ್ಯಾ ಅವರ ಸಾಕು ತಂದೆ ಆರ್.ಟಿ. ನಾರಾಯಣ್ ಅವರ ನಿಧನದ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅ.4ರಂದು ಬೆಳಗ್ಗೆ ರಸ್ತೆ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದರು. ಆ.10ರಂದು ರಸ್ತೆ ಮೂಲಕ ಮೈಸೂರಿಗೆ ಆಗಮಿಸಿ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆ ಸಂಬಂಧ ಮಂತ್ರಿಗಳು, ಶಾಸಕರು, ಮುಖಂಡರ ಸಭೆ ನಡೆಸಿದ್ದರು. ಕಲಾಮಂದಿರದಲ್ಲಿ ಸಿಟಿ ಟುಡೇ ಪತ್ರಿಕೆಯ ಬಿಡುಗಡೆ ಸಮಾರಂಭ, ಸುತ್ತೂರಿನಲ್ಲಿ ಮಠದ ನವೀಕೃತ ಕಟ್ಟಡದ ಪ್ರವೇಶೋತ್ಸವದಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿ 100 ದಿನಗಳಾದರೂ ಸ್ವಗ್ರಾಮಕ್ಕೆ ಹೋಗಲು ಬಿಡುವಾಗಿಲ್ಲ. ಸುತ್ತೂರು ಮಠಕ್ಕೆ ಭೇಟಿ ನೀಡುವ ಮೂಲಕ ಸ್ವಕ್ಷೇತ್ರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದರು.
ಕೆಆರ್‌ಎಸ್, ಕೆ.ಆರ್. ನಗರಕ್ಕೆ ಒಮ್ಮೆ: ಆ.1ರಂದು ಕೆಆರ್‌ಎಸ್‌ಗೆ ಭೇಟಿ ನೀಡಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದರು. ಆ.19ರಂದು ಜಿಲ್ಲೆಯ ಕೆ.ಆರ್. ನಗರಕ್ಕೆ ಭೇಟಿ ನೀಡಿ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಮ್ಯಾ ಪರ ಪ್ರಚಾರ ನಡೆಸಿ ಅಲ್ಲಿಂದ ಮಂಡ್ಯಕ್ಕೆ ತೆರಳಿದರು. ಸಿದ್ದರಾಮಯ್ಯ ಅವರು ಈ 100 ದಿನಗಳಲ್ಲಿ ಮೈಸೂರಿಗೆ ಬಂದು ಸ್ವಗೃಹದಲ್ಲಿ ವಾಸ್ತವ್ಯ ಹೂಡಿದಾಗಲೆಲ್ಲಾ ಜನತಾ ದರ್ಶನ ನಡೆಸಿದ್ದಾರೆ. ಬಜೆಟ್‌ನಲ್ಲಿ ಒಂದಷ್ಟು ಕೊಡುಗೆ ನೀಡಿದ್ದಾರೆ.  ಜಿಪಂ ಸಿಇಒ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ, ಹುಲಿ ಯೋಜನೆ ನಿರ್ದೇಶಕ ಸ್ಥಾನದಲ್ಲಿದ್ದವರನ್ನು ಬದಲು ಮಾಡಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಮತ್ತಷ್ಟು ಸರ್ಜರಿ ನಡೆಯುವ ನಿರೀಕ್ಷೆ ಇದೆ.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement