ಹಲ್ಲೆ ನಡೆಸಿ ದೋಚಿದ್ದ ಇಬ್ಬರು ಆರೋಪಿಗಳ ಸೆರೆ
ಮೈಸೂರು: ಮದ್ಯದಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಎನ್.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ.ಶಾಂತಿನಗರ ಎಂ.ಜಿ. ಕರೀಂ ಬ್ಲಾಕ್ ನಿವಾಸಿ ಫಯಾಜ್ ಎಂಬವರ ಪುತ್ರ ಅಬ್ದುಲ್ ರೆಹಮಾನ್ (28) ಮತ್ತು ಹನುಮಂತನಗರ ಇಡಬ್ಲ್ಯೂಎಸ್ ನಿವಾಸಿ ಲಿಯಾಕತ್ ಅಲಿ ಖಾನ್ ಎಂಬವರ ಪುತ್ರ ಶಬ್ಬೀರ್ ಅಲಿ ಖಾನ್ (24) ಬಂಧಿತರು. ಜು.7ರ ರಾತ್ರಿ ಎನ್.ಆರ್. ಮೊಹಲ್ಲಾದ ಶ್ರೀರಾಮ ವೈನ್ಸ್ನ ಮಾಲೀಕ ಪ್ರದೀಪ್ ಅವರು ಯಾದವಗಿರಿಯ ರೇಲ್ವೆ ಅಂಡರ್ಬ್ರಿಡ್ಜ್ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಬಂಧಿತರು ಸೇರಿದಂತೆ 7 ಮಂದಿ ಹಲ್ಲೆ ನಡೆಸಿ, ಅವರ ಬಳಿಯಿದ್ದ 2.50 ಲಕ್ಷ ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಭಾನುವಾರ ಎನ್.ಆರ್. ಮೊಹಲ್ಲಾದ ರಬ್ಬಾನಿ ಮಸೀದಿ ಹತ್ತಿರ ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್, ದೋಚಿದ್ದ ಹಣದಲ್ಲಿ 40 ಸಾವಿರ ಹಾಗೂ ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳು ಭಾಗಿಯಾಗಿದ್ದು, ಇತರೆ ಆರೋಪಿಗಳು ಬೇರೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಬ್ಬ ಆರೋಪಿ ಮಾತ್ರ ತಲೆ ಮರೆಸಿಕೊಂಡಿದ್ದಾನೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಸರ ಅಪಹರಣ ಯತ್ನ: ಇಬ್ಬರಿಗೆ ಧರ್ಮದೇಟು
ಕ.ಪ್ರ.ವಾರ್ತೆ , ಮೈಸೂರು , ಆ. 19
ಮಹಿಳೆಯೊಬ್ಬರ ಸರ ಅಪಹರಣಕ್ಕೆ ಯತ್ನಿಸಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುವೆಂಪುನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಉದಯಗಿರಿ ನಿವಾಸಿಗಳಾದ ಚಿರಂಜೀವಿ ಪ್ರಭು (28) ಮತ್ತು ದರ್ಶನ್ (23) ಬಂಧಿತ ಆರೋಪಿಗಳು. ಇಬ್ಬರು ಮಹಿಳೆಯೊಬ್ಬರ ಸರ ಅಪಹರಿಸಲು ಯತ್ನಿಸಿ ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾರೆ. ಕುವೆಂಪುನಗರ ಮನುಜಪಥ ರಸ್ತೆ ನಿವಾಸಿ ಅನುರಾಧ ಎಂಬವರು ನವಿಲು ರಸ್ತೆಗೆ ತೆರಳಿ ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಆರೋಪಿಗಳು ಅನುರಾಧ ಧರಿಸಿದ್ದ ರೋಲ್ಡ್ಗೋಲ್ಡ್ ಸರ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಅನುರಾಧ ಕೂಗಿದಾಗ, ಬೈಕಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಇಬ್ಬರನ್ನು ಸಾರ್ವಜನಿಕರಾದ ಸಂತೋಷ್, ರವಿ ಮತ್ತು ಇನ್ನಿತರರು ಹಿಡಿದು ಥಳಿಸಿ ಕುವೆಂಪುನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ರೈಲಿಗೆ ಸಿಕ್ಕಿ ಬೆಮಲ್ ನೌಕರ ಸಾವು
ಮೈಸೂರು: ರೈಲಿಗೆ ಸಿಕ್ಕಿ ಬೆಮಲ್ ನೌಕರ ಮೃತಪಟ್ಟಿರುವ ಘಟನೆ ನಂಜನಗೂಡು ಬಳಿಯ ಸುಜಾತಪುರಂ ರೈಲು ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಮೈಸೂರು ಹೊರವಲಯದ ಕೂರ್ಗಳ್ಳಿ ವಿನಾಯಕನಗರ ನಿವಾಸಿ ಪಿ.ರಾಜು (56) ಮೃತಪಟ್ಟವರು. ಇವರು ಬೆಮಲ್ನಲ್ಲಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡಿಕೊಂಡಿದ್ದು, ಸುಜಾತಪುರಂನಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುತ್ತಿದ್ದಾಗ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಅವರ ಜೇಬಿನಲ್ಲಿದ್ದ ಬೆಮಲ್ ಟೋಕನ್ನಿಂದ ಪೊಲೀಸರು ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೈಸೂರು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದಾ ವಸೂಲಿ: ಇಬ್ಬರ ಬಂಧನ
ಮೈಸೂರು: ಗಣಪತಿ ಹಬ್ಬಕ್ಕಾಗಿ ಬಲವಂತವಾಗಿ ಚಂದಾ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದೇವರಾಜ ಮೊಹಲ್ಲಾ ಆನೆ ಸರೋಟ್ ಬೀದಿ ನಿವಾಸಿ ನಾಗರಾಜ ಎಂಬವರ ಪುತ್ರ ಚಂದ್ರು ಅ. ಬೋಂಡಾ (26) ಮತ್ತು ಉತ್ತನಹಳ್ಳಿ ನಿವಾಸಿ ಸುಬ್ಬಯ್ಯ ಎಂಬವರ ಪುತ್ರ ಮಹದೇವ (30) ಬಂಧಿತ ಆರೋಪಿಗಳು. ಚಂದ್ರು ಬೋಟಿ ಬಜಾರ್ನಲ್ಲಿ, ಮಹದೇವ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ. ಈ ಇಬ್ಬರು ಧನ್ವಂತ್ರಿ ರಸ್ತೆಯಲ್ಲಿರುವ ಶ್ರೀರಾಮ ಬೇಕರಿಗೆ ಭಾನುವಾರ ತೆರಳಿ, ಗಣಪತಿ ಹಬ್ಬಕ್ಕಾಗಿ 50 ಕೆ.ಜಿ. ಬಾಸೂಮತಿ ಅಕ್ಕಿ ಅಥವಾ 50 ಸಾವಿರ ಕೊಡಬೇಕು ಎಂದು ಒತ್ತಾಯಿಸಿ ಅವಾಜ್ ಹಾಕಿದ್ದಾರೆ. ಈ ಸಂಬಂಧ ಬೇಕರಿ ವ್ಯವಸ್ಥಾಪಕ ಸುಬ್ರಹ್ಮಣ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೇವರಾಜ ಠಾಣೆ ಇನ್ಸ್ಪೆಕ್ಟರ್ ಕಾಂತರಾಜು, ಎಸ್ಐಗಳಾದ ಬಾಲಕೃಷ್ಣ, ಲೇಪಾಕ್ಷ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೂಜಾಟ: 7 ಮಂದಿ ಬಂಧನ
ಮೈಸೂರು: ಕುಂಬಾರಕೊಪ್ಪಲಿನಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ವಿಜಯನಗರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಕುಂಬಾರಕೊಪ್ಪಲು ತೋಟದ ಮನೆಯಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಬಂಧಿಸಿ 16,000 ಹಾಗೂ 7 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿನ್ನಾಭರಣ ದೋಚುತ್ತಿದ್ದ ಬಿಹಾರಿಗಳ ಸೆರೆ
ಮೈಸೂರು: ಗಮನ ಬೇರೆಡೆ ಸೆಳೆದು ಹಣ ಹಾಗೂ ಚಿನ್ನಾಭರಣ ದೋಚುತ್ತಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಿಹಾರ ಮೂಲದ ಧರ್ಮೇಂದ್ರಕುಮಾರ್ ಮತ್ತು ರಜನೀಶ್ ಬಂಧಿತ ಆರೋಪಿಗಳು. ಹೆಬ್ಬಾಳು ಬಸವನಗುಡಿ ವೃತ್ತ ಬಳಿಯ ಎಸ್ಬಿಐ ಬಳಿ ಈ ಇಬ್ಬರು ಇತ್ತೀಚೆಗೆ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಹಣ ದೋಚಿದ್ದರು. ಭಾನುವಾರ ಸಹ ಅದೇ ಜಾಗದಲ್ಲಿ ಅಡ್ಡಾಡುತ್ತಿದ್ದ ಈ ಇಬ್ಬರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿ ಸಾವು
ಮೈಸೂರು: ನಗರದ ಹೊರವಲಯದ ಹೂಟಗಳ್ಳಿ ಸಂತೆಮಾಳದ ಬಳಿಯ ಶನೇಶ್ವರ ದೇವಾಲಯದ ಬಳಿ ಶೆಡ್ನಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಚಾಮುಂಡಿ (55) ಮೃತಪಟ್ಟ ವ್ಯಕ್ತಿ. ಈತನ ವಿಳಾಸ ಪತ್ತೆಯಾಗಿಲ್ಲ. ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಎಡಗೈಯಲ್ಲಿ ಮುನಿ ಎಂಬ ಹಚ್ಚೆ ಇದೆ. ಬಿಳಿ ಶರ್ಟ್, ಪಾಚಿ ಬಣ್ಣದ ಟೀ- ಶರ್ಟ್, ನೀಲಿ ನಿಕ್ಕರ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418317 ಸಂಪರ್ಕಿಸಿ.