ಅನುಬಂಧನಾ, ರಕ್ಷಾ ಬಂಧನ...
ಕ.ಪ್ರ.ವಾರ್ತೆ , ಮೈಸೂರು , ಆ. 20
ಅಣ್ಣ- ತಂಗಿಯರ ಅನುಬಂಧ ಸಾರುವ ರಕ್ಷಾಬಂಧನ ಆಚರಣೆಯು ನಗರದ ವಿವಿಧೆಡೆ ಸಂಭ್ರಮ ಸಡಗರದಲ್ಲಿ ಮಂಗಳವಾರ ನಡೆಯಿತು.
ಉತ್ತರ ಭಾರತದ ಆಚರಣೆಯಾಗಿರುವ ರಾಖಿ ಹಬ್ಬವು ಕ್ರಮೇಣ ಕರ್ನಾಟಕದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ಅಂತೆಯೇ ಇಲ್ಲಿಯೂ ಸೋದರರಿಗೆ ಸಹೋದರಿಯರು ಹಾಗೂ ಪರಿಚಿತರಿಗೆ ಹೆಣ್ಣು ಮಕ್ಕಳು ರಾಖಿ ಕಟ್ಟಿ ಉಡುಗೊರೆ ಪಡೆಯುವುದು ಸಾಮಾನ್ಯವಾಗಿತ್ತು.
ಟಿಬೆಟ್ ಮಹಿಳಾ ಸಂಘದವರು ನಗರದ ವಿವಿಧ ಕಚೇರಿಗಳಿಗೆ ತೆರಳಿ, ಆರತಿ ಬೆಳಗಿ, ರಾಖಿ ಕಟ್ಟಿ, ಸಿಹಿ ಹಂಚಿ ರಕ್ಷಣೆಯ ಪ್ರತೀಕ ಸಾರಿದ್ದು ವಿಶೇಷವಾಗಿತ್ತು.
ಯಾದವಗಿರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನ ಮಹೋತ್ಸವದಲ್ಲಿ ಅಲ್ಲಿನ ಸಹೋದರಿಯರು ರಾಖಿ ಕಟ್ಟಿ ಸೋದರತ್ವ ಮೆರೆದರು.
ಈಶ್ವರಿ ವಿಶ್ವವಿದ್ಯಾಲಯದ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಇಎಂಎಲ್ ಮುಖ್ಯ ಮಹಾಪ್ರಬಂಧಕ ಆರ್.ಎಚ್. ಮುರಳೀಧರ್ ಹಾಗೂ ಮೈಸೂರು ವಿವಿಯ ಸಾಮರ್ಥ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಸೇವಾ ಕೇಂದ್ರದ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಅವರು ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮಂಡಿ ಮೊಹಲ್ಲಾದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಸಹೋದರಿಯರು ಇಲ್ಲಿನ ಮಂಡಿ ಮೊಹಲ್ಲಾದ ರಾಣೆಗೆ ತೆರಳಿ ಇನ್ಸ್ಪೆಕ್ಟರ್ ರಾಜಣ್ಣ ಅವರಿಗೆ ರಾಖಿ ಕಟ್ಟಿದರು. ಬ್ರಹ್ಮಕುಮಾರಿ ಸಂಧ್ಯಾ ಇತರರು ಇದ್ದರು.